ಮುನ್ನುಗ್ಗುವ ಛಾತಿಯ ಬಂಟ ಜನಾಂಗ: ಪರಮೇಶ್ವರ ಬಣ್ಣನೆ
Sunday, October 29, 2023
ಉಡುಪಿ, ಅ.29 (ಲೋಕಬಂಧು ವಾರ್ತೆ): ಬಂಟ ಸಮುದಾಯ ಮುನ್ನುಗ್ಗುವ ಛಾತಿಯುಳ್ಳವರು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಬಣ್ಣಿಸಿದರು.ಭಾನುವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿ ನಡೆದ ವಿಶ್ವ ಬಂಟರ ಸಮ್ಮೆಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ, ಬಂಟರು ಮುಟ್ಟದ ಕ್ಷೇತ್ರವಿಲ್ಲ. ಮುನ್ನುಗ್ಗುವ ಛಾತಿ, ಸಹನಶೀಲತೆ, ಧ್ಯೆರ್ಯದ ಕಾರಣದಿಂದ ಅವರು ವಿಶ್ವದಲ್ಲಿ ಮನ್ನಣೆ ಪಡೆದಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಜಾಗತಿಕ ಮಟ್ಟದಲ್ಲಿ 200ಕ್ಕೂ ಹೆಚ್ಚು ಸಂಘಗಳನ್ನು ಸ್ಥಾಪಿಸಲು ಬೇರೆ ಯಾವುದೇ ಸಮಾಜಕ್ಕೆ ಸಾಧ್ಯವಿಲ್ಲ.
ಬಂಟ ಸಮಾಜ ದೇಶದ ಅರ್ಥಿಕ ವ್ಯವಸ್ಥೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಮಂಗಳೂರು ರಾಜ್ಯದ 2ನೇ ನಗರವಾಗಿ ಬೆಳೆಯುತ್ತಿದೆ. ದೇಶದ 5ನೇ ಅತೀ ದೊಡ್ಡ ಬಂದರು ಮಂಗಳೂರಿನಲ್ಲಿದೆ. ಪ್ರಸ್ತುತ ಭಾರತ, ವಿಶ್ವದ 2ನೇ ಅರ್ಥಿಕತೆಯ ದೇಶವಾಗಿ ಬೆಳೆಯುತ್ತಿದ್ದು, ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಚಿನ್ನ ಸಂಸ್ಕರಣೆಗೆ ಅವಕಾಶ
ರಾಜ್ಯವನ್ನು ನಂ. 1 ಅರ್ಥಿಕತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಚಿನ್ನ ಸಂಸ್ಕರಣೆ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಸರ್ಕಾರದಿಂದ ಜಾಗ ಸಹಿತ ಎಲ್ಲಾ ನೆರವು ನೀಡಲಾಗುವುದು.
ಮಂಗಳೂರು ಮತ್ತು ಬೆಂಗಳೂರು ಕಾರಿಡಾರ್ ನಿರ್ಮಾಣದ ಬೇಡಿಕೆ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಅದರಿಂದ 3.5 ಗಂಟೆಯಲ್ಲಿ ಬೆಂಗಳೂರು ತಲುಪಲು ಸಾಧ್ಯವಾಗಲಿದೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ, ಎ. ಸದಾನಂದ ಶೆಟ್ಟಿ, ಮುನಿಯಾಲು ಉದಯ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಆನಂದ ಶೆಟ್ಟಿ ತೋನ್ಸೆ, ವಕ್ವಾಡಿ ಪ್ರವಿಣ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸಂತೋಷ್ ಶೆಟ್ಟಿ, ರವಿನಾಥ ಶೆಟ್ಟಿ, ದಿವಾಕರ ಶೆಟ್ಟಿ, ಚಿತ್ರನಟ ರಿಷಬ್ ಶೆಟ್ಟಿ, ಸಂಗೀತ ನಿರ್ದೆಶಕ ಗುರುಕಿರಣ್, ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ, ಮಿಥುನ್ ರೈ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಎಸ್.ಪಿ. ಅರುಣ್ ಇದ್ದರು.
ತಾರಾ ಮೆರುಗು
ಮಧ್ಯಾಹ್ನ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಶಿವಧ್ವಜ್, ನೀರಿಕಾ ಶೆಟ್ಟಿ, ದೀಪಕ್ ರೈ ಪಾಣಾಜೆ, ವಿಜಯ ಕುಮಾರ್ ಕೊಡಿಯಾಲಬೈಲ್, ಕಿಶೋರ ಶೆಟ್ಟಿ, ಭರತ್ ಭಂಡಾರಿ, ಗುರು ಹೆಗ್ಡೆ, ಸೂರಜ್ ಹೆಗ್ಡೆ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಯಶ್ ಶೆಟ್ಟಿ, ರವಿ ರೈ, ಸುಂದರ್ ರೈ, ರೋಹನಿ ಶೆಟ್ಟಿ, ಅದ್ವಿಕಾ ಶೆಟ್ಟಿ, ಗಿರೀಶ್ ಶೆಟ್ಟಿ, ಮಾನಸಿ ಸುಧೀರ್, ಅವಿನಾಶ್ ಶೆಟ್ಟಿ, ಮಂಜು ರೈ, ದಿಲೀಪ್ ಶೆಟ್ಟಿ, ತೃಷಾ ಶೆಟ್ಟಿ, ಸ್ವಾತಿ ಶೆಟ್ಟಿ, ನಿಧಿ ಶೆಟ್ಟಿ, ನವೀನ್ ಶೆಟ್ಟಿ, ಸಂದೇಶ್ ಶೆಟ್ಟಿ, ಪ್ರಥಮ ಪ್ರಸಾದ್, ಅಡ್ಯಾರು ಮಾಧವ ನಾಯಕ್, ನಿರ್ದೇಶಕ ವಿನು ಬಳಂಜ ಅವರನ್ನು ಸನ್ಮಾನಿಸಲಾಯಿತು.
ಎಲ್ಲರನ್ನೂ ಬೆಳೆಸುವ ಕಾರ್ಯ
ಸಾನ್ನಿಧ್ಯ ವಹಿಸಿದ್ದ ಒಡಿಯೂರು ದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ, ಬಂಟ ಸಮಾಜ ಜಾತಿ ಭೇದವಿಲ್ಲದೆ ಎಲ್ಲರನ್ನೂ ಬೆಳೆಸುವ ಕಾರ್ಯ ಮಾಡಿದೆ. ಬಂಟ ಎಂದರೆ ರಕ್ಷಕ, ಧರ್ಮ ಸಂರಕ್ಷಣೆಯ ಬಂಟ. ಅತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಬಂಟ ಸಮುದಾಯ.
ಬಂಟ ಸಮಾಜ ಸಂಘಟಿತವಾದ ದೇಶ ಆಳುವ ಶಕ್ತಿ ಬರಲಿದೆ ಎಂದರು.