
ಬ್ರಹ್ಮಕಲಶೋತ್ಸವದಿಂದ ನಾಡಿಗೆ ಮಂಗಳ
Saturday, March 1, 2025
ಲೋಕಬಂಧು ನ್ಯೂಸ್
ಕಾಪು: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಳ ದಕ್ಷಿಣ ಭಾರತದಲ್ಲೇ ಅತ್ಯಪೂರ್ವ ಎಂಬಂತೆ ಅದ್ಭುತವಾಗಿ ನಿರ್ಮಾಣಗೊಂಡಿದೆ. ಭಕ್ತರ ಶಿಲಾಸೇವೆ ಸಹಿತ ವಿವಿಧ ಸೇವಾ ಕಾರ್ಯಗಳ ಹೊಸತನಗಳೊಂದಿಗೆ ನಿರ್ಮಾಣಗೊಂಡಿರುವ ಮಾರಿಗುಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲೂ ವೈಶಿಷ್ಟ್ಯಗಳಿದ್ದು, ಅದರಿಂದ ನಾಡಿಗೆ ಸನ್ಮಂಗಳ ಉಂಟಾಗಲಿದೆ ಎಂದು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.
ಮಾರಿಗುಡಿಯಿಂದ ಸಮಾಜ ಜಾಗೃತಿ
ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಸಮಸ್ತ ಹಿಂದೂ ಸಮಾಜವನ್ನು ಜಾಗೃತಗೊಳಿಸುವಲ್ಲಿ ಕಾಪು ಮಾರಿಗುಡಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹೊಸಮಾರಿ ಗುಡಿಯ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಸಮಷ್ಟಿ ಹಿತ ಕಾಯ್ದುಕೊಂಡು ಬರುವ ಮೂಲಕ ಶ್ರೇಷ್ಠತೆಯನ್ನು ಮೆರೆಯಲಾಗಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಮುಖ್ಯಸ್ಥ ಕಲ್ಲಡ್ಕ ಡಾ.ಪ್ರಭಾಕರ ಭಟ್ ಮಾತನಾಡಿ, ನಮ್ಮನ್ನು ಹೆತ್ತು ಹೊತ್ತು ಸಲಹುವ ಅಮ್ಮನೇ ನಮೆಲ್ಲರನ್ನೂ ಸಂಸ್ಕಾರವಂತರನ್ನಾಗಿ ಬೆಳೆಸುತ್ತಾಳೆ. ಅದಕ್ಕೆ ಪೂರಕವಾಗಿ ಕಾಪು ಮಾರಿಯಮ್ಮ ದೇವಸ್ಥಾನ ಧರ್ಮ ಕಾರ್ಯಗಳನ್ನು ಉಳಿಸಿ, ಬೆಳೆಸುವ ಸಂಸ್ಕಾರ ಕೇಂದ್ರವಾಗಿ ಮೂಡಿಬರಲಿ ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಲ್ಲರ ನಿರೀಕ್ಷೆಗೂ మిరి ಮಾರಿಗುಡಿ ನಿರ್ಮಾಣಗೊಂಡಿದೆ. ಇದರ ಹಿಂದೆ ದುಡಿದ ಪ್ರತಿಯೊಬ್ಬರ ಶ್ರಮವೂ ಇಲ್ಲಿ ಉಲ್ಲೇಖನೀಯ ಮತ್ತು ಶ್ಲಾಘನೀಯ ಎಂದರು.
ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ ಕಾಪು, ಕೊಡವೂರು ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ ಕೊಡವೂರು, ಶಂಭು ಶೆಟ್ಟಿ ಉಡುಪಿ, ಮಸ್ಕತ್ ಉದ್ಯಮಿ ದಿವಾಕರ್ ಶೆಟ್ಟಿ ಮಲ್ಲಾರು, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಭ್ಯಾಗತರಾಗಿದ್ದರು.
ದಾನಿ ಪುರುಷೋತ್ತಮ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಪಕ್ಕಳ ವಂದಿಸಿದರು.