-->
Udupi: ಕೃಷ್ಣನ ಅವತಾರ ರೂಪದಷ್ಟೇ ಆಕರ್ಷಕ

Udupi: ಕೃಷ್ಣನ ಅವತಾರ ರೂಪದಷ್ಟೇ ಆಕರ್ಷಕ

ಲೋಕಬಂಧು ನ್ಯೂಸ್, ಉಡುಪಿ
ಕೃಷ್ಣಾವತಾರ ಕಲಿಯುಗಕ್ಕೆ ಪೂರಕವಾದ ಅವತಾರವಾಗಿದೆ. ಕೃಷ್ಣನ ರೂಪದಂತೆ ಆತನ ಅವತಾರವೂ ಆಕರ್ಷಕ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ರಾಜಾಂಗಣದಲ್ಲಿ ನಡೆದ ಜನ್ಮಾಷ್ಟಮಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.


ಭಗವಂತನ ಎಲ್ಲ ಅವತಾರಗಳಿಗಿಂತಲೂ ಕೃಷ್ಣನ ಅವತಾರ ವಿಶಿಷ್ಟವಾದುದು. ಜನತೆ ಆಕರ್ಷಣೆಗೆ ಒಳಗಾಗುವಂತೆ ಕೃಷ್ಣನೂ ಭಕ್ತರಿಂದ ಆಕರ್ಷಿಸಲ್ಪಡುತ್ತಾನೆ ಹಾಗೂ ಭಕ್ತರ ಭಕ್ತಿಗೆ ಆಕರ್ಷಿತನಾಗುತ್ತಾನೆ. ಕೃಷ್ಣ ಪದದ ಅರ್ಥವೇ ಆಕರ್ಷಣೆ ಎಂದರು.


ಜಗತ್ತನ್ನು ಸೃಷ್ಟಿಸಿದ ಭಗವಂತ, ಅದರ ನಿರ್ವಹಣೆಯ ಹೊಣೆಯನ್ನೂ ಹೊತ್ತಿದ್ದಾನೆ. ಜಗತ್ತಿನ ಶಿಷ್ಟರು ಸಂತಸದಿಂದಿರಬೇಕು, ದುಷ್ಟರಿಗೆ ಶಿಕ್ಷೆಯಾಗಬೇಕು. ಹಾಗಾದಾಗ ಮಾತ್ರ ಜಗತ್ತಿನ ಸುಸೂತ್ರ ನಿರ್ವಹಣೆ ಸಾಧ್ಯ. ಈ ನಿಟ್ಟಿನಲ್ಲಿ ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆ ಆ ಮೂಲಕ ಧರ್ಮ ಸಂರಕ್ಷಣೆಗಾಗಿ ಭಗವಂತ ಕೃಷ್ಣನ ರೂಪದಲ್ಲಿ ಅವತರಿಸಿದ್ದಾನೆ.


ಜಗತ್ಕಲ್ಯಾಣಕ್ಕಾಗಿ ಅವತರಿಸಿದ ಕೃಷ್ಣನ ಜಯಂತಿ ಆಚರಣೆಯಿಂದ ಜಗತ್ತಿನ ಕಲ್ಯಾಣ ಸಾಧ್ಯ ಎಂದು ಶ್ರೀಗಳು‌ ಹೇಳಿದರು.


ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.


ಶಾಸಕ ಯಶಪಾಲ್ ಸುವರ್ಣ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಲಯನ್ಸ್ ಗವರ್ನರ್ ಸಪ್ನಾ ಸುರೇಶ್, ಕರ್ಣಾಟಕ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ಶ್ರೀಧರ ಮಯ್ಯ, ಶ್ರೀಮಠದ ಭಕ್ತರಾದ ಅಮೆರಿಕಾದ ಅನಂತ ಮತ್ತು ಸಂಧ್ಯಾ ದಂಪತಿ ಹಾಗೂ ಸಾವಿತ್ರಿ ಅಭ್ಯಾಗತರಾಗಿದ್ದರು.


ತುಮಕೂರಿನ ಮರುತ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಓಂಪ್ರಕಾಶ್ ಭಟ್ ಸಂಪಾದಿತ `ಸುಗುಣೇಂದ್ರತೀರ್ಥರು ಕಂಡಂತೆ ಶ್ರೀಕೃಷ್ಣ' ಪುಸ್ತಕ ಅನಾವರಣಗೊಳಿಸಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಿದ್ವಾಂಸ ಡಾ.ಗೋಪಾಲಾಚಾರ್ ನಿರೂಪಿಸಿದರು.


ಬಳಿಕ ಶ್ರೀ ಭಗವತಿ ಯಕ್ಷ ಕಲಾಬಳಗ ಪುತ್ತೂರು ಕಲಾವಿದರಿಂದ `ಶ್ರೀಕೃಷ್ಣ ಪುತ್ರ ವಿವಾಹ' ಯಕ್ಷಗಾನ ಪ್ರದರ್ಶನ ನಡೆಯಿತು.
ಮಧ್ಯಾಹ್ನದಿಂದ ಸಂಜೆ ವರೆಗೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಸುಧೀರ್ ರಾವ್ ಕೊಡವೂರು ದಾಸರ ಪದಗಳನ್ನು ಹಾಡಿದರು.

Ads on article

Advertise in articles 1

advertising articles 2

Advertise under the article