ಮಹಾರುದ್ರ ಯಾಗಕ್ಕೆ ಕೊಡವೂರು ಸಜ್ಜು: ಸರ್ವ ಸಿದ್ಧತೆ ಪೂರ್ಣ

ಲೋಕಬಂಧು ನ್ಯೂಸ್ | ಉಡುಪಿ, ಮೇ 14
ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸರ್ವರ ಸಹಭಾಗಿತ್ವದ ಆಶಯದೊಂದಿಗೆ ಆಯೋಜಿಸುತ್ತಿರುವ ಅಪೂರ್ವವಾದ ಮಹಾರುದ್ರ ಯಾಗ ಪುಣ್ಯೋತ್ಸವಕ್ಕೆ ವಾಮದೇವ- ವಾಸುದೇವ ಸನ್ನಿಹಿತರಾದ ಜಾಗೃತ ಕ್ಷೇತ್ರ ಪಶ್ಚಿಮದ ಕಡಲ ತಡಿಯ ಕೊಡವೂರು ಶ್ರೀ ಶಂಕರನಾರಾಯಣ ದೇವಳ ಸನ್ನದ್ಧವಾಗಿದೆ.
ಮೇ 14ರಿಂದ 19ರ ವರೆಗೆ ನಡೆಯುವ ಯಾಗವನ್ನು ಸಂಭಮದಿಂದ ನಾಡಹಬ್ಬದ ಮಾದರಿಯಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಔದ್ಯೋಗಿಕ ಹಾಗೂ ಮನರಂಜನೆ ಕಾರ್ಯಕ್ರಮಗಳ ಮೂಲಕ ಆಚರಿಸಲುದ್ದೇಶಿಸಿದ್ದು ಸರ್ವ ಸಿದ್ಧತೆಗಳೂ ಪೂರ್ಣಗೊಂಡಿವೆ. ಬೃಹತ್ ಯಾಗ ಮಂಟಪ ಸಿದ್ಧವಾಗಿದೆ.
ಝಗಮಗಗೊಂಡ ಪರಿಸರ
ಮಹಾರುದ್ರ ಯಾಗ ನಡಯುವ ಪರಿಸರವಿಡೀ ಝಗಮಗಗೊಂಡಿದೆ. ಕೊಡವೂರನ್ನು ಸಂಪರ್ಕಿಸುವ ರಸ್ತೆಗಳನ್ನು ವಿದ್ಯುದ್ದೀಪ, ಪತಾಕೆ, ತಳಿರು-ತೋರಣದಿಂದ ಸಿಂಗರಿಸಲಾಗಿದೆ. ಸಿಟಿಜನ್ ಸರ್ಕಲ್, ಕೊಡವೂರು, ಆದಿವುಡುಪಿಯಲ್ಲಿ ಸ್ವಾಗತ ಗೋಪುರ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದೆ.
ಪ್ರತಿದಿನ ಹೋಮ ಹವನಾದಿಗಳು ನಡೆಯಲಿದ್ದು, ದೇವಸ್ಥಾನದ ಧ್ವಜಸ್ತಂಭದ ಸಮೀಪದ ಮಹಾರುದ್ರ ಯಾಗ ಮಂಟಪ ರಚಿಸಲಾಗಿದೆ. 100 ಮಂದಿ ಋತ್ವಿಜರು ಭಾಗವಹಿಸಲಿದ್ದಾರೆ.
ಐದು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಂಕಲ್ಪ ಮಾಡುವ ಮಹದವಕಾಶ ದೊರೆಯಲಿದೆ.


ಕೊಡವೂರು ವ್ಯವಸಾಯ ಸಂಘದ ಹಳೆ ಕಟ್ಟಡ ಮುಂಭಾಗದಲ್ಲಿ ಅನ್ನಛತ್ರ ನಿರ್ಮಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನೂ ಸಿದ್ಧಪಡಿಸಲಾಗಿದೆ.


ವಾಹನ ನಿಲುಗಡೆ ವ್ಯವಸ್ಥೆ
ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆಗಾಗಿ ದೇವಸ್ಥಾನದ ಬಲಬದಿ ಇರುವ ಮೂಡುಬೆಟ್ಟು ಸಂಪರ್ಕ ರಸ್ತೆ, ಮಹಾಲಕ್ಷ್ಮಿ ಲೇಔಟ್ ಮೈದಾನ, ಕೊಡವೂರು ವ್ಯವಸಾಯ ಸಹಕಾರಿ ಸಂಘದ ಮುಂಭಾಗ, ಕೆನರಾ ಬ್ಯಾಂಕ್ ಹಿಂಭಾಗ ಮತ್ತು ಎದುರು ಬದಿ ಹಾಗೂ ಹರಿಹರ ನಗರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ತಿಳಿಸಿದ್ದಾರೆ.


ಪ್ರತಿದಿನ ಭಕ್ತಿ ಸಂಗೀತ
ಪ್ರತಿದಿನ ವಿವಿಧ ತಂಡಗಳಿಂದ ಮಧ್ಯಾಹ್ನ ಮತ್ತು ಸಂಜೆ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಶ್ರೀ ರಮ್ಲಾ ಬೆಳ್ತಂಗಡಿ ಮತ್ತು ತಂಡ, ಕಾವ್ಯ ಸೀತಾರಾಮ ತಂಡ ಕೊಡವೂರು, ತೇಜಸ್ವಿ ಅನಿಲ್ ರಾಜ್ ಮಣಿಪಾಲ, ಮಂಚಿ ಶ್ರೀ ದುರ್ಗಾ ಮ್ಯೂಸಿಕ್, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮತ್ತು ಬಳಗ, ಸುದರ್ಶನ್ ಸುವರ್ಣ ಮಲ್ಪೆ ಮತ್ತು ತಂಡ, ಜಗದೀಶ ಆಚಾರ್ಯ ಪುತ್ತೂರು ತಂಡ ಭಕ್ತಿ ಸಂಗೀತ ನಡೆಸಿಕೊಡಲಿದ್ದಾರೆ.


ಮೇ 14ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ
ಮೇ 14ರಂದು ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಅಪರಾಹ್ನ 4 ಗಂಟೆಗೆ ಮಲ್ಪೆ ಅಯ್ಯಪ್ಪಸ್ವಾಮಿ ಮಂದಿರದಿಂದ ಕೊಡವೂರು ಶಂಕರನಾರಾಯಣ ದೇವಸ್ಥಾನಕ್ಕೆ ಸಾಗಿಬರಲಿದೆ.
ಬೆಂಗಳೂರು ಬ್ರಹ್ಮಶ್ರೀ ಆನಂದ ಸಿದ್ಧಿಪೀಠಂ ಮತ್ತು ಶ್ರೀಲಕ್ಷ್ಮೀ ಭೂವರಾಹ ಸಾಲಿಗ್ರಾಮ ಕ್ಷೇತ್ರ ಸಂಸ್ಥಾಪಕ ಡಾ.ಶ್ರೀ ಮಹರ್ಷಿ ಆನಂದ ಗುರೂಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು.
ಮಹಾರುದ್ರಯಾಗ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ|ಜಿ.ಶಂಕರ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡುವರು ಎಂದು ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.


ಧಾರ್ಮಿಕ ಸಭೆಗಳು
ಮೇ 15ರಂದು ಸಚಿವ ರಾಮಲಿಂಗ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು 16ರಂದು ಕಾಣಿಯೂರು ಶ್ರೀ, 18ರಂದು ಒಡಿಯೂರು ಶ್ರೀ ಹಾಗೂ ಮೇ 19ರಂದು ಸಮಾರೋಪದಲ್ಲಿ ಶೃಂಗೇರಿ ಜಗದ್ಗುರುಗಳಿಂದ ಆಶೀರ್ವಚನ ನಡೆಯಲಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.
5 ಸಾವಿರ ಮಹಿಳೆಯರಿಂದ ಸಂಕಲ್ಪ
ಮಹಾರುದ್ರ ಯಾಗವನ್ನು ನಾಡಹಬ್ಬದಂತೆ ಆಚರಿಸಲು ನಿರ್ಧರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದೊಂದಿಗೆ ಮನರಂಜನೆ. ಕ್ರೀಡೋತ್ಸವ, ಅರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ 5 ಸಾವಿರ ಮಹಿಳೆಯರಿಗೆ ಮಹಾರುದ್ರ ಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ 10 ಸಾವಿರ ಮಂದಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಮೇ 19ರಂದು ನಡೆಯುವ ಮಹಾಅನ್ನಸಂತರ್ಪಣೆಯಲ್ಲಿ 40 ಸಾವಿರ ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.


ಮೇ 17ರಂದು ಸಮುದ್ರ ತೀರದಲ್ಲಿ ಗಂಗಾರತಿ
ಮೇ 17ರಂದು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ಸಮುದ್ರ ಪೂಜೆ, ಕಾಶಿ ವಾರಾಣಾಸಿ ಪುರೋಹಿತರಿಂದ ಗಂಗಾರತಿ, ರಾತ್ರಿ 8ಕ್ಕೆ ಪ್ರಸಿದ್ದ ಕಲಾವಿದೆ ಮಂಗ್ಲಿ ಅವರಿಂದ ಶಿವಗಾನಾಮೃತ ನಡೆಯಲಿದ್ದು ವೇದಿಕೆ ಸಿದ್ಧಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಮಲ್ಪೆ ಬೀಚ್'ನಲ್ಲಿ ಬೆಳಗ್ಗಿನಿಂದ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ.


ಮೇ 10ರಿಂದ 20ರ ವರೆಗೆ ಕೊಡವೂರು ವ್ಯವಸಾಯ ಬ್ಯಾಂಕಿನ ಹಿಂಭಾಗದಲ್ಲಿ ಮೋಜು ಮಸ್ತಿನ ಆಟಿಕೆಗಳು, ವಸ್ತು ಪ್ರದರ್ಶನ ಇದೆ.


ಮೇ 18: ಬೃಹತ್ ಉದ್ಯೋಗ ಮೇಳ
ಮೇ 16ರಂದು ಬೆಳಗ್ಗೆ ಕೊಡವೂರಿನ ವಿಪ್ರಶ್ರೀ ಸಭಾ ಭವನದಲ್ಲಿ ನಡೆಯುವ ಆರೋಗ್ಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ಇಸಿಜಿ, ರಕ್ತಪರೀಕ್ಷೆ, ಹಲ್ಲಿನ ಪರೀಕ್ಷೆ, ಉಚಿತ ಕನ್ನಡಕ ವಿತರಣೆ ಸೇರಿದಂತೆ ಹಲವು ಚಿಕಿತ್ಸೆಗಳು, 17ರಂದು ಮಲ್ಪೆ ಬೀಚ್ನಲ್ಲಿ ಬೆಳಗ್ಗಿನಿಂದ ಗ್ರಾಮೀಣ ಕ್ರೀಡಾಕೂಟ, ಮೇ 18ರಂದು ಬೆಳಗ್ಗೆ 9ರಿಂದ ವಿಪ್ರಶ್ರೀ ಸಭಾಭವನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಸುಮಾರು 60 ಕಂಪೆನಿಗಳು ಪಾಲ್ಗೊಳ್ಳಲಿವೆ. 6 ಸಾವಿರ ಮಂದಿಗೆ ಉದ್ಯೋಗ ದೊರಕಲಿದೆ.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿರುವರು.


ಮೇ 19: ಮಹಾರುದ್ರ ಯಾಗ, ಮಹಾಅನ್ನಸಂತರ್ಪಣೆ
ಮೇ 15ರಿಂದ 19ರ ವರೆಗೆ ವಿವಿಧ ಧಾರ್ಮಿಕ ವಿಧಿ- ವಿಧಾನಗಳು, ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಮೇ 19ರಂದು ಬೆಳಗ್ಗೆ 6ರಿಂದ ಮಹಾರುದ್ರ ಯಾಗ, ಶ್ರೀ ದುರ್ಗೆಯ ಸನ್ನಿಧಿಯಲ್ಲಿ ದುರ್ಗಾಯಾಗ ನಡೆಯಲಿದೆ. 5,000ಕ್ಕೂ ಅಧಿಕ ಮಹಿಳೆಯರಿಗೆ ಸಂಕಲ್ಪ ಭಾಗ್ಯ ದೊರೆಯಲಿದೆ


ಯಾಗ ಪೂರ್ಣಾಹುತಿ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೀಪಾರಾಧನಾ ಪೂರ್ವಕ ರಂಗಪೂಜೆ ನಡೆಯಲಿದೆ ಎಂದು ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.