ಕಪ್ಪೆಕೆರೆ ನಿಧನಕ್ಕೆ ತಲ್ಲೂರು ಸಂತಾಪ

ಲೋಕಬಂಧು ನ್ಯೂಸ್ ಉಡುಪಿ, ಮೇ 14
ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ, ಲಯಬ್ರಹ್ಮ ಖ್ಯಾತಿಯ ಕಪ್ಪೆಕೆರೆ ಸುಬ್ರಾಯ ಈಶ್ವರ ಹೆಗಡೆ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಕಪ್ಪೆಕೆರೆ ಸುಬ್ರಾಯ ಈಶ್ವರ ಹೆಗಡೆ ಯಕ್ಷಗಾನದ ದಿಗ್ಗಜ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಸತ್ಯನಾರಾಯಣ, ಪ್ರಭಾಕರ ಭಂಡಾರಿ ಒಡನಾಡಿಯಾಗಿದ್ದರು.


ಗುಂಡಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿoಗ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ನಡೆಸಿದ್ದಾರೆ.


ಅದ್ಭುತ ತಾಳ, ಲಯ ಸಿದ್ ಹೊಂದಿದ್ದ ಕಪ್ಪೆಕೆರೆ ಭಾಗವತರ ಪೌರಾಣಿಕ ಜ್ಞಾನ, ಪ್ರಸಂಗ ನಡೆಯ ಪರಿಣತಿ ಅಪೂರ್ವವಾಗಿತ್ತು. ಯಕ್ಷಗಾನ ಗುರುಗಳಾಗಿಯೂ ಅವರು ಸೇವೆ ಸಲ್ಲಿಸಿದ್ದರು.


ಯಕ್ಷಗಾನ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ಯಕ್ಷಮಂಗಲ ಪ್ರಶಸ್ತಿ ನೀಡಿ ಗೌರವಿಸಿತ್ತು.


ಅಂಥ ಮೇರು ನಟನ ಅಗಲುವಿಕೆ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.