ಲೋಕಬಂಧು ನ್ಯೂಸ್ | ಉಡುಪಿ, ಜೂ. 9
ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡದಿಂದ ಟ್ರಾಫಿಕ್ ಜಾಮ್, ಕೆಲವು ತಿರುವಿನ ದಂಡೆಗಳ ಕುಸಿತದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಮಂಗಳವಾರ ಆಗುಂಬೆ ಘಾಟಿ ತಿರುವುಗಳ ವೀಕ್ಷಣೆ ನಡೆಸಿದರು.
ಸನಿಹದ ಹುಲಿಕಲ್ ಘಾಟಿಯಲ್ಲಿ ವಾಹನ ನಿರ್ಬಂಧ ಇರುವುರಿಂದ ಆಗುಂಬೆ ಘಾಟಿಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದು ಮತ್ತು ನಿರ್ಬಂಧವಿದ್ದರೂ ಜಲ್ಲಿಕಲ್ಲು ಮತ್ತು ಭಾರಿ ತೂಕದ ವಾಹನಗಳ ಚಾಲನೆಯಿಂದ ಭೂಕುಸಿತದ ಸಂಭವ ಬಗ್ಗೆ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಂಸದ ಕೋಟ, ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತಾಗಿ ತಿರುವಿನ ದಂಡೆಗಳಲ್ಲಿ ಸಾವಿರ ಮೀಟರ್ ತಡೆಬೇಲಿ ನಿರ್ಮಿಸಲು ಸೂಚಿಸಲಾಗಿದೆ. ತಿರುವುಗಳ ಕುಸಿತ ಮತ್ತು ಘಾಟಿ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರಕ್ಕೆ 15 ಕೋ.ರೂ. ಕಾಮಗಾರಿ ಪ್ರಸ್ತಾವನೆಗೆ ಮಂಜೂರಾತಿ ದೊರೆತಿದ್ದು, ಮಳೆಗಾಲ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಆಗುಂಬೆ ಘಾಟಿಯ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಸಂಸದ ರಾಘವೇಂದ್ರ ಅವರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಮತ್ತು ಈಗಿರುವ ರಸ್ತೆಗಳ ದ್ವಿಪಥದ ಬಗ್ಗೆ ಡಿಪಿಆರ್.ಗಾಗಿ ಟೆಂಡರ್ ಕರೆಯಲಾಗಿದ್ದು ಸಾಧ್ಯತಾ ವರದಿಯನ್ನು ಅವಲಂಬಿಸಿ ಎರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸುವಂತೆ ಎನ್ಎಚ್ ಆರ್.ಓ. ಶ್ರೀಧರ ಅವರಿಗೆ ಸಂಸದ ಕೋಟ ದೂರವಾಣಿ ಮೂಲಕ ಸೂಚಿಸಿದರು.
ಹೆದ್ದಾರಿ ಅಧಿಕಾರಿಗಳು ಭಾರಿ ತೂಕದ ವಾಹನ ಸಂಚಾರ ನಿರ್ಬಂಧಿಸದಿದ್ದಲ್ಲಿ ಮಳೆಗಾಲದಲ್ಲಿ ಘಾಟಿ ಕುಸಿಯುವ ಅಪಾಯದ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿಗೆ ಅಗತ್ಯ ಸಲಹೆ ನೀಡುವಂತೆ ವಿನಂತಿಸಿದರು. ರಸ್ತೆ ದ್ವಿಪಥವಾಗಬೇಕಿದ್ದರೆ ಎಂಟನೇ ತಿರುವಿನ ನಂತರದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸರಳ ಆ್ಯಪ್'ನಲ್ಲಿ ಪ್ರಸ್ತಾವನೆ ಸಲ್ಲಿಸಲು ಕೋಟ ಸೂಚನೆ ನೀಡಿದರು.
ಸಂಸದರೊಂದಿಗೆ ಆಗುಂಬೆ ವನ್ಯಜೀವಿ ವಲಯದ ಅಮಾಸೆಬೈಲು ಅರಣ್ಯಾಧಿಕಾರಿ ರೂಪೇಶ್ ಚವ್ಹಾಣ್, ಸೋಮೇಶ್ವರ ವನ್ಯಜೀವಿ ವಲಯ ಹೆಬ್ರಿ ಅರಣ್ಯಾಧಿಕಾರಿ ಚಿದಾನಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಅಭಿಯಂತರ ನವೀನ್ ಮತ್ತು ಸಹಾಯಕ ಶಶಿಧರ್ ಇದ್ದರು.

