ಜೂ.9ರಿಂದಲೇ ಖಾಸಗಿ ಬಸ್ ದರ ಏರಿಕೆ

ಲೋಕಬಂಧು ನ್ಯೂಸ್ | ಉಡುಪಿ, ಜೂ. 9
ಖಾಸಗಿ ಬಸ್ ಪ್ರಯಾಣ ದರವನ್ನು ರಾಜ್ಯಾದ್ಯಂತ ಶೇ.3ರಿಂದ ಶೇ.8ರ ವರೆಗೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರ ಜೂನ್ 9ರಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಖಾಸಗಿ ಮಜಲು ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡೀಸೆಲ್ ದರದಲ್ಲಿ ನಿರಂತರ ಏರಿಕೆ, ವಾಹನಗಳ ನಿರ್ವಹಣಾ ವೆಚ್ಚ ಹಾಗೂ ನೌಕರರ ವೇತನ ಸೇರಿದಂತೆ ವಿವಿಧ ಖರ್ಚುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಸ್ ದರ ಪರಿಷ್ಕರಣೆ ಅನಿವಾರ್ಯ ಎಂದರು.


ರಾಜ್ಯ ಸರಕಾರ ಒಂದು ವರ್ಷದ ಹಿಂದೆ ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಲೀ.ಗೆ 3 ರೂ. ಏರಿಕೆ ಮಾಡಿದ್ದು, ಕೇಂದ್ರ ಸರಕಾರ ನಾಲ್ಕು ಹಂತಗಳಲ್ಲಿ ಒಟ್ಟಾರೆ 8.17ರಷ್ಟು ದರ ಹೆಚ್ಚಳ ಮಾಡಿದೆ. ಅದರ ಪರಿಣಾಮವಾಗಿ ವಾಹನಗಳ ಬಿಡಿ ಭಾಗಗಳು, ಟೈರ್ ರಿಸೋಲಿಂಗ್, ದೈನಂದಿನ ನಿರ್ವಹಣೆ ಸೇರಿದಂತೆ ಎಲ್ಲಾ ವೆಚ್ಚಗಳಲ್ಲಿ ಗಣನೀಯ ಏರಿಕೆಯಾಗಿದೆ. ಜೊತೆಗೆ ನೌಕರರ ವೇತನ, ವಿಮೆ, ರಸ್ತೆ ತೆರಿಗೆ ಹಾಗೂ ಇತರ ಕಡ್ಡಾಯ ಶುಲ್ಕಗಳ ಹೆಚ್ಚಳದಿಂದ ಬಸ್ ಮಾಲಕರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ 2020ರ ಅಧಿಸೂಚನೆಯನ್ವಯ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ ಎಂದವರು ವಿವರಿಸಿದರು.


ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಪ್ರಯಾಣ ದರ ರಿಯಾಯಿತಿ ಎಂದಿನಂತೆ ಮುಂದುವರಿಯಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಪ್ರಯಾಣ ದರ ಪರಿಷ್ಕರಣೆ ಕುರಿತು ಸರ್ಕಾರದ ಮುಂದೆ ಮನವಿ ಸಲ್ಲಿಸಲಾಗಿದ್ದು, ಅದರ ಅನುಸಾರವೇ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ ಎಂದು ಸುರೇಶ್ ನಾಯಕ್ ಸ್ಪಷ್ಟಪಡಿಸಿದರು.


ಖಾಸಗಿ ಬಸ್ ದರ ಏರಿಕೆಯಿಂದ ಪ್ರಯಾಣಿಕರ ಮೇಲೆ ಸ್ವಲ್ಪ ಮಟ್ಟಿನ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದ್ದರೂ ಸಾರಿಗೆ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಬಸ್ ಮಾಲಕರ ಸಂಘ ಅಭಿಪ್ರಾಯಪಟ್ಟಿದೆ ಎಂದು ಪ್ರತಿಪಾದಿಸಿದರು.


ಸುದ್ದಿಗೋಷ್ಠಿಯಲ್ಲಿ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಪಾಧ್ಯಕ್ಷ ಸದಾನಂದ ಛಾತ್ರ ಇದ್ದರು.