ಲೋಕಬಂಧು ನ್ಯೂಸ್ | ಉಡುಪಿ, ಜೂ. 9
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ವಿಷಯ ಇಟ್ಟುಕೊಂಡು ಸಾರಿಗೆ ಪ್ರಾಧಿಕಾರ, ಜಿಲ್ಲಾಡಳಿತದ ಗಮನಕ್ಕೆ ತಾರದೆ, ಸಭೆಯನ್ನೂ ನಡೆಸದೆ ಕೆನರಾ ಬಸ್ ಮಾಲಕರ ಸಂಘ ಏಕಾಏಕಿ ಖಾಸಗಿ ಬಸ್ ದರವನ್ನು ಶೇ. 3ರಿಂದ 8ರ ವರೆಗೆ ದರ ಏರಿಕೆ ಮಾಡಿರುವುದನ್ನು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಎಲ್ಲಾ ಸಂಘಸಂಸ್ಥೆಗಳು, ಸಾರ್ವಜನಿಕರು ಮತ್ತು ಬಸ್ ಮಾಲಕರ ಜೊತೆ ಸಭೆ ನಡೆಸಿ ಚರ್ಚಿಸಿ ನಂತರ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಅದರೆ, ಖಾಸಗಿ ಬಸ್ ಮಾಲಿಕರು ಸರ್ವಾಧಿಕಾರಿಗಳಂತೆ ದಿಢೀರ್ ದರ ಏರಿಕೆ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ದರ ಏರಿಕೆ ನಿಲ್ಲಿಸಬೇಕು ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜೂ.11ರಂದು ಪ್ರತಿಭಟನೆ
ಖಾಸಗಿ ಬಸ್ ದರ ಏರಿಕೆಯನ್ನು ಖಂಡಿಸಿರುವ ಸಿಪಿಐ (ಎಂ), ದರ ಏರಿಕೆಗೆ ಜಿಲ್ಲಾಡಳಿತದ ಕೃಪಾಕಟಾಕ್ಷ ಮತ್ತು ಬೆಂಬಲ ದೊರೆತಿರುವುದು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧ ಎಂದು ಆರೋಪಿಸಿದೆ.
ಬೆಲೆ ಏರಿಕೆಗೆ ಆಡಳಿತ ನಡೆಸುತ್ತಿರುವ ಸರ್ಕಾರಗಳ ಆರ್ಥಿಕ ನೀತಿಗಳೇ ಪ್ರಮುಖ ಕಾರಣ. ಬಸ್ ಮಾಲಕರ ಸಂಘದ ಅಧ್ಯಕ್ಷರು ಬಿಜೆಪಿ ಸರ್ಕಾರದ ಬೆಂಬಲಿಗರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುವ ಬದಲು ಸರ್ಕಾರದಿಂದ ಅಗತ್ಯ ಪರಿಹಾರ ಮತ್ತು ಸೌಲಭ್ಯ ಪಡೆಯಲು ಪ್ರಯತ್ನಿಸಬೇಕಿತ್ತು.
ಕೊರೊನಾ ಅವಧಿಯಲ್ಲಿ ಹೆಚ್ಚಿಸಲಾಗಿದ್ದ ಬಸ್ ಪ್ರಯಾಣ ದರವನ್ನು ಪರಿಸ್ಥಿತಿ ಸಹಜಗೊಂಡ ಬಳಿಕವೂ ಕಡಿಮೆ ಮಾಡಿಲ್ಲ. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡಿರುವುದು ಮತ್ತು ಅದಕ್ಕೆ ಜಿಲ್ಲಾಡಳಿತದ ಮೌನ ಖಂಡನೀಯ.
ಬಸ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜೂ.11ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ಧರಣಿಗೆ ಕರೆ ನೀಡಿದೆ.