ದಲಿತರಿಗೆ ಧೈರ್ಯ ತುಂಬಿದ ಪ್ರೊ.ಬಿ.ಕೆ.

ಲೋಕಬಂಧು ನ್ಯೂಸ್ | ಉಡುಪಿ, ಜೂ. 9
ದಲಿತ ಚಳವಳಿಯ ಪಿತಾಮಹ ಪ್ರೊ.ಬಿ.ಕೃಷ್ಣಪ್ಪ ರಾಜ್ಯದ ಅಧಿಕಾರಿಗಳ ಭ್ರಷ್ಟತೆ, ಭೂಮಾಲೀಕರ ದೌರ್ಜನ್ಯ, ಪೊಲೀಸರ ಅಮಾನುಷ ಕೃತ್ಯ, ರಾಜಕಾರಣಿಗಳ ಹುಸಿ ಜಾತ್ಯತೀತತೆಯನ್ನು ಬಯಲುಮಾಡಿ ದಲಿತರ ಪ್ರಜ್ಞಾವಂತಿಕೆಯನ್ನು ಜಾಗೃತಿಗೊಳಿಸಿ ಅಂಜುವ ಜನರಲ್ಲಿ ಘರ್ಜಿಸುವಂತೆ ಧೈರ್ಯ ತುಂಬಿದವರು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಬಣ್ಣಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಶಾಖೆ ಆಶ್ರಯದಲ್ಲಿ ಮಂಗಳವಾರ ಮಲ್ಪೆ ಸರಸ್ವತಿ ಜಾನಪದ ಕಲಾಮಂದಿರದಲ್ಲಿ ನಡೆದ ದಲಿತ ಚಳವಳಿಯ ಪಿತಾಮಹ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ರಾಜ್ಯದ ಶೋಷಿತ ಸಮುದಾಯಗಳಿಗೆ ಹೋರಾಟ ಹಾಗೂ ಸ್ವಾಭಿಮಾನದ ದಾರಿ ತೋರಿಸಿಕೊಟ್ಟು ದಲಿತರ ಮನೆ, ಮನಗಳಲ್ಲಿ ಹೋರಾಟದ ಹಣತೆ ಹಚ್ಚಿದ ಕೃಷ್ಣಪ್ಪ ರಾಜ್ಯದಾದ್ಯಂತ ದಲಿತ ಚಳವಳಿ ಕಟ್ಟಿದ್ದಾರೆ ಎಂದರು.


ದಸಂಸ ಜಿಲ್ಲಾ ನಾಯಕ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಲಿತ ಮುಖಂಡರಾದ ದಯಾಕರ ಮಲ್ಪೆ ಮೊದಲಾದವರು ಮಾತನಾಡಿದರು.


ದಲಿತ ನಾಯಕರಾದ ಶಿವಣ್ಣ ಪರ್ಕಳ, ಪ್ರಸಾದ್ ನೆರ್ಗಿ, ರವಿರಾಜ್ ಲಕ್ಷ್ಮೀನಗರ, ಕೃಷ್ಣ ಶಿರಿಯಾನ್ ನೆರ್ಗಿ, ನಾರಾಯಣ ಪರ್ಕಳ, ಬಿ.ಎನ್. ಪ್ರಶಾಂತ್, ಸುಶೀಲ್ ಕುಮಾರ್ ಕೊಡವೂರು ಮೊದಲಾದವರಿದ್ದರು.


ಭಗವಾನ್ ಮಲ್ಪೆ ಸ್ವಾಗತಿಸಿ, ವಿನಯ ಬಲರಾಮನಗರ ವಂದಿಸಿದರು.