ಲೋಕಬಂಧು ನ್ಯೂಸ್ | ಉಡುಪಿ, ಜೂ. 9
ವಿಶ್ವ ಗೀತಾ ಚತುರ್ಥ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜೂ.7ರಂದು ಅಮೆರಿಕಾದ ಎಡಿಸನ್ ನ್ಯೂಜೆರ್ಸಿಗೆ ಪುರಪ್ರವೇಶ ಮಾಡಿದ್ದು, ಅಲ್ಲಿನ ಶ್ರೀಕೃಷ್ಣ ವೃಂದಾವನ ಸಭಾಂಗಣದಲ್ಲಿ ಪೌರಸಂಮಾನ ನಡೆಯಿತು. ಅದಕ್ಕೂ ಮುನ್ನ ಶ್ರೀಗಳು ಲಂಡನ್ ಹಾಗೂ ಕೆನಡಾದ ಟೊರಂಟೋದಲ್ಲಿರುವ ತಮ್ಮ ಮಠಗಳಿಗೆ ಭೇಟಿ ನೀಡಿದರು.
ಅಧಿಕ ಮಾಸದ ಪರ್ವಕಾಲದಲ್ಲಿ ಅಮೆರಿಕಾದ ಪೂರ್ವ ಕರಾವಳಿಯ ಭಕ್ತರು ಶ್ರೀಗಳನ್ನು ಗೌರವಾದರಗಳಿಂದ ಬರಮಾಡಿಕೊಂಡರು.
ಶಾಲಗ್ರಾಮ ಶಿಲಾರೂಪಿ ಶ್ರೀಕೃಷ್ಣನ ದರ್ಶನ ಮಾಡಿ, ಆರತಿ ಬೆಳಗಿದ ಬಳಿಕ ಶ್ರೀಗಳನ್ನು ಪ್ರಸನ್ನಾಚಾರ್ಯ ಮತ್ತು ಯೋಗೀಂದ್ರ ಭಟ್ಟರು ಹಸ್ತಲಾಘವದೊಂದಿಗೆ ಆನಂದತೀರ್ಥ ಮಂಟಪ ವೇದಿಕೆಗೆ ಕರೆದೊಯ್ದು ಸಿಂಹಾಸನದಲ್ಲಿ ಕುಳ್ಳಿರಿಸಿದರು.
ಶ್ರೀವತ್ಸ ಬಲ್ಲಾಳ ಪ್ರಸ್ತಾವನೆಗೈದರು. ಮಹೇಶ್ ಹಾವನೂರ್ ಪೌರ ಸನ್ಮಾನದ ಪ್ರಸ್ತಾವನೆ ಮುಂದಿಟ್ಟು, ಶ್ರೀಗಳ ಸಾಧನೆಯನ್ನು ಕೊಂಡಾಡಿದರು. ನ್ಯೂಜೆರ್ಸಿಯ ಮೊಂಟುಗೊಮೆರಿ ಪಟ್ಟಣದ ಮೇಯರ್ ನೀನಾ ಸಿಂಗ್ ಮತ್ತು ಪತಿ ಪರಂಜಿತ್ ಸಿಂಗ್ ಸನ್ಮಾನಪತ್ರ ಸಮರ್ಪಿಸಿದರು. ಶ್ರೀಗಳ ಅಭಿಮಾನಿಗಳಾದ ಡಾ.ಸುಧೀಂದ್ರ, ಪೂರ್ಣಿಮಾ, ಉದ್ಯಮಿ ಸುರೇಶ ವಸಿಷ್ಠ, ಮೀನಾ ವಸಿಷ್ಠ, ಚೇತನ್ ಭರ್ಗರಿ ಅವರು ಶ್ರೀಗಳನ್ನು ಪುಷ್ಪವೃಷ್ಟಿಯೊಂದಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು, ಚತುರ್ಥ ಪರ್ಯಾಯದಲ್ಲಿ ಸಂಚಿತ ಪುಣ್ಯವನ್ನು ಜಗತ್ತಿನ್ನೆಲ್ಲೆಡೆ ಇರುವ ಕೃಷ್ಣ ಭಕ್ತರಿಗೆ ಹಂಚಲು ಬಂದಿರುವುದಾಗಿ ತಿಳಿಸಿ ಕೋಟಿ ಗೀತಾ ಲೇಖನ ಯಜ್ಞವನ್ನು ತಮ್ಮ ಪಂಚಮ ಪರ್ಯಾಯದ ಅವಧಿಯ ವರೆಗೂ ಮುಂದುವರಿಸುವುದಾಗಿ ತಿಳಿಸಿದರು. ಗೋಶಾಲೆ ನಿರ್ಮಾಣ ಸಹಿತ ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ, ಯಜ್ಞಶಾಲೆ ನಿರ್ಮಾಣದ ಆಶಯ ವ್ಯಕ್ತಪಡಿಸಿದರು.
ಶ್ರೀಮಠದ ಶಿಷ್ಯ ಹಾಗೂ ದಾನಿ ಚೇತನ್ ಭರ್ಗರಿ ಅವರು ಯಜ್ಞಶಾಲೆಯ ಪ್ರಗತಿ ವಿವರಿಸಿದರು. ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.
ಮರುದಿನ ಬೆಳಿಗ್ಗೆ ಅಧಿಕ ಮಾಸ ಪ್ರಯುಕ್ತ ಭಕ್ತರಿಗೆ ಶ್ರೀಗಳಿಂದ ತಪ್ತ ಮುದ್ರಾಧಾರಣೆ ನಡೆಯಿತು.
