ಪಂಚ ತತ್ವದಡಿ ಸಮಾಜ ಕಟ್ಟಿದ ಮಹಾವೀರ

ಲೋಕಬಂಧು ನ್ಯೂಸ್ ಉಡುಪಿ, ಮಾ.30
ಬಿಹಾರದಲ್ಲಿ ಜನಿಸಿದ ಮಹಾವೀರ 24ನೇ ತೀರ್ಥಂಕರನಾಗಿ ಲೋಕ ಕಲ್ಯಾಣಕ್ಕೆ ಮುಂದಾದರು. ಪಂಚ ತತ್ವದಡಿ ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ ಮಹಾವೀರರ ಸಂದೇಶದಂತೆ ಸತ್ಯ ಮತ್ತು ಅಹಿಂಸೆಯ ಪಾಲನೆಯ ಮೂಲಕ ಸಾಮರಸ್ಯದ ಸಮಾಜ ಕಟ್ಟುವಂತಾಗಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಆಶಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಸೋಮವಾರ ನಡೆದ  ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಇಂದಿನ ದಿನಮಾನದ ಅನೇಕ ಸಮಸ್ಯೆಗಳ ನಿವಾರಣೆಗಾಗಿ ದಾರ್ಶನಿಕರ ಚಿಂತನೆಗಳು ದಾರಿದೀಪ. ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು.


ಭಗವಾನ್ ಮಹಾವೀರರ ಕುರಿತು ಶ್ವೇತಾ ಜೈನ್ ವಿಶೇಷ ಉಪನ್ಯಾಸ ನೀಡಿದರು. ರಶ್ಮಿ ಸಾಗರ್ ಜಿನಸ್ಮೃತಿ ಪ್ರಸ್ತುತಪಡಿಸಿದರು. ಈ ಸಂಧರ್ಭದಲ್ಲಿ ಯೋಗರಾಜ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜೈನ್ ಮಿಲನ್ ಅಧ್ಯಕ್ಷ ಡಾ. ನಿತಿನ್ ಪಾಟೀಲ್, ಭಾರತೀಯ ಜೈನ್ ಮಿಲನ್ ಕಾರ್ಯದರ್ಶಿ ಪ್ರಸನ್ನ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ರಾಮಾಂಜಿ ನಿರೂಪಿಸಿ, ನಿತಿನ್ ವಂದಿಸಿದರು.