ಲೋಕಬಂಧು ನ್ಯೂಸ್ | ಉಡುಪಿ, ಮಾ.30
ಕ್ರೀಡೆ ಎಂದರೆ ಕೇವಲ ಸ್ಪರ್ಧೆಯಲ್ಲ, ಅದು ವ್ಯಕ್ತಿತ್ವ, ಶಿಸ್ತು ಮತ್ತು ಐಕ್ಯತೆಯ ಪ್ರತಿಬಿಂಬವಾಗಿದ್ದು ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಜಯದಲ್ಲಿ ವಿನಯವನ್ನು ಕಲಿಸುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ ಮಿಲಾಗ್ರಿಸ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂದ್ಯಾಟ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳನ್ನು ಒಗ್ಗೂಡಿಸುವ ಉತ್ತಮ ವೇದಿಕೆಯಾಗಿದೆ. ಇದು ಸಂಸ್ಥೆಯ ಒಗ್ಗಟ್ಟನ್ನು ಬಲಪಡಿಸುವ ಜೊತೆಗೆ ಪರಸ್ಪರ ಸಹಕಾರ ಮತ್ತು ಗೌರವದ ಮೌಲ್ಯಗಳನ್ನು ಉತ್ತೇಜಿಸುತ್ತದೆ. ಶಿಕ್ಷಣ ತರಗತಿಗಳಿಗೆ ಮಾತ್ರ ಸೀಮಿತವಾಗದೆ ಸಂಬಂಧಗಳ ಮೂಲಕ ಮುಂದುವರಿಯುತ್ತದೆ ಎಂದರು.
ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದ ಅವರು ಪ್ರಾಮಾಣಿಕತೆ, ಉತ್ಸಾಹ ಮತ್ತು ಗೌರವದೊಂದಿಗೆ ಆಟವಾಡುವಂತೆ ಸಲಹೆ ನೀಡಿದರು. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ ಮುಂದೆ ಸಾಗುವಂತೆ ಸೂಚಿಸಿದರು. ವಿಜಯ ಮುಖ್ಯವಾದರೂ ಅದಕ್ಕಿಂತ ಕ್ರೀಡಾ ಸ್ಫೂರ್ತಿ ಮುಖ್ಯ ಎಂಬುದನ್ನು ಒತ್ತಿಹೇಳಿದ ಅವರು, ಸೋಲಿನ ನಂತರ ಪುನಃ ಎದ್ದು ನಿಲ್ಲುವ ಮನೋಬಲವೇ ನಿಜವಾದ ಚಾಂಪಿಯನ್'ಗಳ ಗುಣಲಕ್ಷಣ ಎಂದರು.
ಮುಖ್ಯ ಅತಿಥಿಯಾಗಿದ್ದ ಅಂತರರಾಷ್ಟ್ರೀಯ ಮಾಜಿ ಬ್ಯಾಡ್ಮಿಂಟನ್ ಪಟು ಮಂಜುಷಾ ಕನ್ವರ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಸಂಚಾಲಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾಲೇಜಿನ ಉಪಪ್ರಾಂಶುಪಾಲ ಸೋಫಿಯಾ ಡಯಾಸ್, ಶಾಲೆಟ್ ಮಥಾಯಸ್, ಹಳೆವಿದ್ಯಾರ್ಥಿ ಸಂಘದ ಆಲನ್ ಲೂವಿಸ್, ಥೋಮಸ್ ಡಿ'ಸೋಜ, ರಾಜ್ ಬೆಂಗ್ರೆ, ಮೆಲ್ವಿನ್ ಸಿಕ್ವೇರ, ವಿಲ್ಸನ್ ಫೆರ್ನಾಂಡಿಸ್, ನಿಖಿಲ್ ಮೊದಲಾದವರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ಸ್ವಾಗತಿಸಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಸಾಲಿಯಾನ್ ವಂದಿಸಿದರು.
ಎಂಟು ತಂಡಗಳು ಭಾಗವಹಿಸಿದ್ದವು.

.jpeg)