
P B Acharya: ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ನಿಧನ
Friday, November 10, 2023
ಮುಂಬೈ, ನ.10 (ಲೋಕಬಂಧು ವಾರ್ತೆ): ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲ, ಆರ್ ಎಸ್ ಎಸ್ ಹಾಗೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ.ಆಚಾರ್ಯ) ಶುಕ್ರವಾರ ಇಲ್ಲಿನ ಸ್ವಗೃಹದಲ್ಲಿ ನಿಧನರಾದರು.ಉಡುಪಿ ಮೂಲದವರಾದ ಆಚಾರ್ಯ, ಮಾರ್ಗರೆಟ್ ಆಳ್ವಾ ನಂತರ ರಾಜ್ಯಪಾಲ ಹುದ್ದೆಗೆ ಆಯ್ಕೆಯಾದ ಕರಾವಳಿ ಕರ್ನಾಟಕದ ಎರಡನೇ ಮತ್ತು ಜಿಎಸ್‌ಬಿ ಸಮುದಾಯದ ಮೊದಲಿಗರಾಗಿದ್ದರು.
ಬಾಲಕೃಷ್ಣ ಹಾಗೂ ರಾಧಾ ಆಚಾರ್ಯ ದಂಪತಿ ಪುತ್ರರಾದ ಪಿ.ಬಿ. ಆಚಾರ್ಯ ಅವರು ಉಡುಪಿಯ ಎಂಜಿಎಂ ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು.
ಅನಂತರ ಮುಂಬಯಿಗೆ ತೆರಳಿದ ಅವರು ಶಿಕ್ಷಣ ಮತ್ತು ಉದ್ಯೋಗ ಒಟ್ಟಾಗಿ ನಿರ್ವಹಿಸುತ್ತಾ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮುಂಬಯಿ ವಿ.ವಿ.ಯಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದ ಅವರು, ಮುಂಬಯಿ ವಿ.ವಿ. ಸೆನೆಟ್ ಸದಸ್ಯರಾಗಿದ್ದರು. ಸಂಘ ಪರಿವಾರದ ಸಂಘಟನೆಗಳಲ್ಲಿ ಹಲವು ವರ್ಷ ಸಕ್ರಿಯರಾಗಿದ್ದ ಅವರು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು.
ಉಡುಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪಿ.ಬಿ. ಆಚಾರ್ಯ, ರಾಜ್ಯಪಾಲರಾಗಿದ್ದ ವೇಳೆಯೂ ಉಡುಪಿಗೆ ಆಗಾಗ ಭೇಟಿ ನೀಡುತ್ತಿದ್ದರು.
ಪೇಜಾವರ ಶ್ರೀ ಸಂತಾಪ
ನಾಗಾಲ್ಯಾಂಡಿನ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ಮೂಲತಃ ಉಡುಪಿಯವರೇ ಆಗಿದ್ದ ಆಚಾರ್ಯ ಕರ್ತವ್ಯದಲ್ಲಿದ್ದಾಗಲೂ ಉಡುಪಿ ಬಗ್ಗೆ ಅತೀವ ಶ್ರದ್ಧೆ ಇಟ್ಟುಕೊಂಡಿದ್ದರು. ಶ್ರೀಮಠ ಮತ್ತು ನಮ್ಮ ಗುರುಗಳ ಬಗ್ಗೆಯೂ ಅತೀವ ಪ್ರೀತಿ, ಅಭಿಮಾನಗಳನ್ನು ಹೊಂದಿದ್ದರು. ಅಯೋಧ್ಯಾ ರಾಮ ಮಂದಿರಕ್ಕಾಗಿ ನಿಧಿ ಸಂಗ್ರಹ ಅಭಿಯಾನ ನಡೆದಾಗ ನಮ್ಮೊಡನೆ ಮಹಾರಾಷ್ಟ್ರದ ರಾಜಭವನಕ್ಕೂ ಆಗಮಿಸಿ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಿಸಿದ್ದನ್ನು ಸ್ಮರಿಸುವುದಾಗಿ ತಿಳಿಸಿದ ಪೇಜಾವರ ಶ್ರೀಪಾದರು, ದೈವಭಕ್ತಿ ದೇಶಭಕ್ತಿಗಳ ಸಂಗಮದಂತಿದ್ದ ಆಚಾರ್ಯ ದೇಶಕ್ಕೆ ಸಲ್ಲಿಸಿದ ಕೊಡುಗೆ ಅಪಾರ. ಅವರ ಆತ್ಮಕ್ಕೆ ಶ್ರೀಕೃಷ್ಣ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.