.jpg)
Kota Srinivas Poojary: ಸರ್ಕಾರದಿಂದ ಹಿಂದುಳಿದ ವರ್ಗಗಳ ನಿರ್ಲಕ್ಷ್ಯ: ಕೋಟ ಆಕ್ರೋಶ
Saturday, November 11, 2023
ಉಡುಪಿ, ನ.11 (ಲೋಕಬಂಧು ವಾರ್ತೆ): ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಕೊರತೆಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ 2,400 ಹಾಸ್ಟೆಲ್ ಗಳಿದ್ದು ಒಂದು ಲಕ್ಷ ಮಂದಿ ಹಾಸ್ಟೆಲ್ ಗೆ ಬೇಡಿಕೆ ಇರಿಸಿದ್ದಾರೆ.
ವಿದ್ಯಾರ್ಥಿ ನಿಲಯ ಇಲ್ಲದೆ ಶಿಕ್ಷಣ ಪಡೆಯಲು ಹಿಂದುಳಿದ ವರ್ಗಗಳ ಮಕ್ಕಳಿಗೆ ತೊಂದರೆ ಆಗುತ್ತಿದೆ. ಆ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ ಎಂದು ಹೇಳಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಸರ್ಕಾರ ಇದ್ದಾಗ 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಅವಕಾಶ ಕಲ್ಪಿಸಿತ್ತು. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಅವಕಾಶ ಮಾಡಿದ್ದೆವು ಎಂದರು.
ಆಗಸ್ಟ್ ತಿಂಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 100 ಕೋ. ರೂ.ಗೆ ಅನುಮೋದನೆ ನೀಡಿ ಹಣ ಬಿಡುಗಡೆಗೆ ಆದೇಶ ಮಾಡಲಾಗಿತ್ತು ಆದರೆ, ಅದರ ಪ್ರಯೋಜನ ಇವತ್ತಿಗೂ ಸಿಗಲಿಲ್ಲ. ಸಮುದಾಯ ಭವನ ನಿರ್ಮಿಸಿ ಇಲಾಖೆಗೆ ವರದಿ ಕೊಟ್ಟರೂ ಹಣ ಬಿಡುಗಡೆ ಮಾಡಿಲ್ಲ.
ಅನೇಕ ಸ್ವಾಮೀಜಿಗಳು, ಮುಖಂಡರು ಆ ಬಗ್ಗೆ ಗಮನ ಸೆಳೆದಿದ್ದಾರೆ. ವಾರದೊಳಗೆ ಹಿಂದುಳಿದ ವರ್ಗದವರ ಸಮುದಾಯ ಭವನ ನಿರ್ಮಾಣಕ್ಕಾಗಿ 100 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಶಾಸಕ ಕೋಟ ತಾಕೀತು ಮಾಡಿದರು.
ಟೆಂಡರ್ ಕರೆದು ಹಿಂದುಳಿದ ವರ್ಗದ ಮಹಿಳೆಯರಿಗೆ 10 ಸಾವಿರ ಹೊಲಿಗೆ ಯಂತ್ರ ಹಂಚಲು ಯೋಜನೆ ರೂಪಿಸಿ, ಫಲಾನುಭವಿಗಳ ಆಯ್ಕೆಯೂ ಆಗಿತ್ತು. ಅದೂ ಈಡೇರಿಲ್ಲ ಎಂದು ವಿಷಾದಿಸಿದರು.
ಹಿಂದುಳಿದ ವರ್ಗವನ್ನು ಸರ್ಕಾರ ತುಂಬಾ ನಿರ್ಲಕ್ಷ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಿಂದುಳಿದ ವರ್ಗದ ಬಿಜೆಪಿ ಶಾಸಕರು ವಿಧಾನಸೌಧ ಎದುರಿನ ಗಾಂಧಿ ಪ್ರತಿಮೆ ಎದುದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿ ಅವರಿಗೆ ನೀಡಿದರು.
ವಿರೋಧ ಪಕ್ಷದ ನಾಯನ ಸ್ಥಾನ ನೀಡಿದಲ್ಲಿ ನಿಭಾಯಿಸುವುದಾಗಿಯೂ ಕೋಟ ಹೇಳಿದರು