Family politics: ಬಿಜೆಪಿಯ ನೈಜ ಕುಟುಂಬ ರಾಜಕಾರಣ ಸಾಬೀತು
Saturday, November 11, 2023
ಉಡುಪಿ, ನ.11 (ಲೋಕಬಂಧು ವಾರ್ತೆ): ಕುಟುಂಬ ರಾಜಕಾರಣದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಿದ್ದ ಬಿಜೆಪಿಯವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ನೈಜ ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಎಂದರೆ ಸಿದ್ದಾಂತಗಳನ್ನು ನಂಬಿ ಬದುಕುವ ಕಾರ್ಯಕರ್ತರ ಪಕ್ಷವಾಗಿದ್ದು ಎಂದಿಗೂ ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ನಳಿನ್ ಕುಮಾರ್ ಕಟೀಲ್, ಬಿ.ಎಸ್. ಯಡಿಯೂರಪ್ಪ ಮೊದಲಾದವರು ಸದಾ ಹೇಳಿಕೊಂಡು ಬಂದಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು 6 ತಿಂಗಳು ಕಳೆದರೂ ವಿಪಕ್ಷ ನಾಯಕನನ್ನು ನೇಮಿಸಲು ಬಿಜೆಪಿಯ ದೆಹಲಿ ನಾಯಕರಿಗೆ ಸಾಧ್ಯವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಹಲವು ಘಟಾನುಘಟಿಗಳ ಹೆಸರು ಕೇಳಿಬಂದರೂ ಬಿಜೆಪಿ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆದರಿಕೆಗೆ ಮಣಿದು ಅವರ ಪುತ್ರನನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಕುಟುಂಬ ರಾಜಕಾರಣವಲ್ಲದೇ ಮತ್ತೇನು ಎಂದು ಕಾಂಚನ್ ಪ್ರಶ್ನಿಸಿದ್ದಾರೆ.
ಸದಾ ಕಾಂಗ್ರೆಸ್ ಪಕ್ಷದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಸಿ.ಟಿ. ರವಿ ಮತ್ತು ಸುನಿಲ್ ಕುಮಾರ್ ನೂತನ ಅಧ್ಯಕ್ಷರ ನೇಮಕವನ್ನು ಸಹಿಸುವರೇ?
ಈಗಾಗಲೇ ಎಲ್ಲಾ ರೀತಿಯ ಅಧಿಕಾರ ಅನುಭವಿಸಿರುವ ಬಿ.ಎಸ್. ಯಡಿಯೂರಪ್ಪ ಕುಟುಂಬದಲ್ಲಿ ಈಗಾಗಲೇ ಓರ್ವ ಪುತ್ರನನ್ನು ಸಂಸದ, ವಿಜಯೇಂದ್ರ ಅವರನ್ನು ಶಾಸಕ ಹಾಗೂ ಸದ್ಯ ರಾಜ್ಯಾಧ್ಯಕ್ಷ ಮಾಡಿರುವುದು ಬಿಜೆಪಿ ಪಕ್ಷ ತನ್ನ ನೈಜ ಸಿದ್ದಾಂತ ಮರೆತು ಕಾರ್ಯಕರ್ತ ಕೇಂದ್ರಿತ ಪಕ್ಷವಾಗಿರದೇ ವ್ಯಕ್ತಿ ಕೇಂದ್ರಿತ ಪಕ್ಷವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈಗಾಗಲೇ ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಕೌಟುಂಬಿಕ ಪಕ್ಷವಾಗಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಕೂಡಾ ತನ್ನ ಪಕ್ಷವನ್ನು ಮುಂದಿನ ದಿನಗಳಲ್ಲಿ ಕೌಟಂಬಿಕ ಪಕ್ಷ ಎಂದು ಹೆಸರು ಬದಲಾಯಿಸಿಕೊಳ್ಳಬೇಕಾಗುವ ಪರಿಸ್ಥಿತಿ ಬರುವ ಲಕ್ಷಣಗಳು ಕಾಣುತ್ತಿವೆ ಎಂದು ರಮೇಶ ಕಾಂಚನ್ ಕುಟುಕಿದ್ದಾರೆ.
ಮುಂದಿನ ದಿನಗಳಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು ಅದರ ಮೊದಲಾದರೂ ಓರ್ವ ಸಮರ್ಥ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಗಟ್ಟಿತನವನ್ನು ಬಿಜೆಪಿ ನಾಯಕರು ತೋರಿಸಲಿ ಎಂದವರು ಸಲಹೆ ನೀಡಿದ್ದಾರೆ.