-->
ಪತ್ರಕರ್ತರಿಗೆ ಸಾಸ್ತಾನ ಟೋಲ್‌ ಶುಲ್ಕ ವಿನಾಯಿತಿಗೆ ಮನವಿ

ಪತ್ರಕರ್ತರಿಗೆ ಸಾಸ್ತಾನ ಟೋಲ್‌ ಶುಲ್ಕ ವಿನಾಯಿತಿಗೆ ಮನವಿ

ಲೋಕಬಂಧು ನ್ಯೂಸ್
ಬ್ರಹ್ಮಾವರ: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಈ ಹಿಂದೆ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿಯನ್ನು ಮುಂದುವರಿಸುವಂತೆ ಆಗ್ರಹಿಸಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಾಸ್ತಾನ ಟೋಲ್ ಮುಖ್ಯಸ್ಥರಿಗೆ ಮಾರ್ಚ್ 20ರಂದು ಮನವಿ ನೀಡಲಾಯಿತು.ಕರ್ನಾಟಕ ಕಾರ್‍ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಗಳಾದ ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲೆಯ ಇತರ ತಾಲೂಕು ಸಂಘಗಳ ಕಾರ್‍ಯನಿರತ ಪತ್ರಕರ್ತರು ಪ್ರತಿದಿನ ಸುದ್ದಿ ಸಂಗ್ರಹ, ಪತ್ರಿಕಾ ಕಚೇರಿಯಲ್ಲಿ ಕಾರ್‍ಯನಿರ್ವಹಿಸಲು ಜಿಲ್ಲೆಯ ಬೇರೆ ಬೇರೆ ಭಾಗದಿಂದ ಸಾಸ್ತಾನ ಟೋಲ್‌ಗೇಟ್ ಮೂಲಕ ಉಡುಪಿ- ಕುಂದಾಪುರ ಹಾಗೂ ಕುಂದಾಪುರ- ಉಡುಪಿ ಮಾರ್ಗವಾಗಿ ಸಂಚರಿಸುತ್ತಾರೆ. ಅವರೆಲ್ಲರಿಗೂ ಹಲವು ವರ್ಷದಿಂದ ಇಲ್ಲಿ ಶುಲ್ಕ ವಿನಾಯಿತಿ ನೀಡಲಾಗಿತ್ತು.


ಆದರೆ, ಇದೀಗ ಏಕಾಏಕಿ ಈ ವಿನಾಯಿತಿಯನ್ನು ರದ್ದುಪಡಿಸಲಾಗಿದೆ ಹಾಗೂ ಸ್ಥಳೀಯ ವರದಿಗಾರರಾದ ಬ್ರಹ್ಮಾವರ ಭಾಗದವರಿಗೂ ಶುಲ್ಕ ವಿಧಿಸಲಾಗುತ್ತಿದೆ.


ಕೆಲವೊಮ್ಮೆ ಪತ್ರಕರ್ತರ ಸಂಘದ ಸದಸ್ಯರು ಗುರುತು ಚೀಟಿ ತೋರಿಸಿದಾಗ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ನೀಡಿದರೂ ಒಂದೆರಡು ಕಿ.ಮೀ. ಪ್ರಯಾಣಿಸಿದ ಬಳಿಕ ಶುಲ್ಕ ಖಾತೆಯಿಂದ ಕಡಿತಗೊಂಡ ಸಂದೇಶ ತಲುಪುತ್ತಿದೆ. ಅದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ.


ಜಿಲ್ಲೆಯಲ್ಲಿ ಕಾರು ಹೊಂದಿರುವ ಪತ್ರಕರ್ತರು ಕೆಲವೇ ಕೆಲವು ಮಂದಿ ಇದ್ದು ನಿತ್ಯ ಕಾರಿನಲ್ಲಿ ಪ್ರಯಾಣಿಸುವವರು ಬೆರಳೆಣಿಕೆಯವರು ಮಾತ್ರ. ಪತ್ರಕರ್ತರ ಸಂಘದ ಸದಸ್ಯರಾಗಿರುವ ಅಧಿಕೃತ ಸದಸ್ಯರ ವಿವರದ ಪಟ್ಟಿಯನ್ನು  ನೀಡಲು ಸಿದ್ಧರಿದ್ದು, ಅಧಿಕೃತ ಸದಸ್ಯರಿಗೆ ಈ ಹಿಂದಿನಂತೆ ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹಿಸಲಾಯಿತು ಹಾಗೂ ವಾರದೊಳಗೆ ಈ ಬಗ್ಗೆ ತೀರ್ಮಾನ ತಿಳಿಸಬೇಕು. ಶುಲ್ಕ ವಿನಾಯಿತಿ ನೀಡದಿದ್ದಲ್ಲಿ ಮುಂದಿನ  ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.


ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಗೀಶ್ ನಾಯರಿ ಅವರಿಗೆ ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಮನವಿ ಸಲ್ಲಿಸಿದರು.


ಮನವಿ ಸ್ವೀಕರಿಸಿದ ನಾಯಿರಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ತೀರ್ಮಾನ ತಿಳಿಸುವುದಾಗಿ ಭರವಸೆ ನೀಡಿದರು.


ಬ್ರಹ್ಮಾವರ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಉಪಾಧ್ಯಕ್ಷ ಮೋಹನ ಉಡುಪ, ಖಜಾಂಚಿ ಶೇಷಗಿರಿ ಭಟ್, ಪದಾಧಿಕಾರಿಗಳಾದ ಬಂಡೀಮಠ ಶಿವರಾಮ ಆಚಾರ್ಯ, ಪ್ರವೀಣ್ ಮುದ್ದೂರು, ರವೀಂದ್ರ ಕೋಟ, ಇಬ್ರಾಹಿಂ ಸಾಹೇಬ್, ಪ್ರವೀಣ್ ಬ್ರಹ್ಮಾವರ, ಕಾರ್ಯದರ್ಶಿ ಹರೀಶ್ ಕಿರಣ್ ತುಂಗ, ಚಂದ್ರಶೇಖರ ಬೀಜಾಡಿ, ನಾಗರಾಜ್ ಅಲ್ತಾರು, ಕೆ.ಜಿ.ವೈದ್ಯ, ಗಣೇಶ್ ಸಾಹೇಬ್ರಕಟ್ಟೆ  ಮೊದಲಾದವರಿದ್ದರು.


ಕೋಟ ಠಾಣಾಧಿಕಾರಿ ರಾಘವೇಂದ್ರ ಸಿ. ಇದ್ದರು.

Ads on article

Advertise in articles 1

advertising articles 2

Advertise under the article