-->
ಮಳೆಗಾಲದ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿ

ಮಳೆಗಾಲದ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿ

ಲೋಕಬಂಧು ನ್ಯೂಸ್
ಉಡುಪಿ: ಮಳೆಗಾಲದ ತುರ್ತು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ವಿಪತ್ತು ನಿರ್ವಹಣೆಗೆ ಇಲಾಖೆ ಅಧಿಕಾರಿಗಳು ಸೂಕ್ತ ಪೂರ್ವ ತಯಾರಿ ನಡೆಸಿ ತುರ್ತಾಗಿ ಸ್ಪಂದಿಸುವಂತೆ ಶಾಸಕ ಯಶಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ನಗರಸಭೆ ಸಭಾಂಗಣದಲ್ಲಿ ನಗರಸಭೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಳೆಗಾಲದ ಪೂರ್ವಸಿದ್ಧತೆ ಬಗ್ಗೆ ಸಭೆ ನಡೆಸಿದರು.


ವಿದ್ಯುತ್ ಲೈನ್ ಹತ್ತಿರವಿರುವ ಮರದ ಗೆಲ್ಲುಗಳ ತೆರವು, ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ ಹಾಗೂ ಕಂಬಗಳನ್ನು ಬದಲಾಯಿಸಿ ಮಳೆಗಾಲದ ಸಂದರ್ಭದಲ್ಲಿ ತುರ್ತು ನಿರ್ವಹಣೆಗೆ ಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.


ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವಿಗೆ ಕ್ರಮ ಹಾಗೂ ತುರ್ತು ಸಂದರ್ಭದಲ್ಲಿ ವಿಶೇಷ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸನ್ನದ್ಧರಾಗಿರುವಂತೆ ತಿಳಿಸಿದರು.


ಸಣ್ಣ ನೀರಾವರಿ ಇಲಾಖೆ ಮೂಲಕ ಮಳೆಗಾಲದ ಆರಂಭಕ್ಕೂ ಮುನ್ನ ರಾಜಕಾಲುವೆ ಹಾಗೂ ತೋಡುಗಳ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಿ ಕೃತಕ ನೆರೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.


ಆರೋಗ್ಯ ಇಲಾಖೆ ಮೂಲಕ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕಾಪಾಡುವ ಬಗ್ಗೆ ಮಾಹಿತಿ ನೀಡಿ, ತುರ್ತು ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಸಮರ್ಪಕ ನಿರ್ವಹಣೆ, ರಸ್ತೆ ಬದಿಯ ಚರಂಡಿ ನೀರು ಸರಾಗವಾಗಿ ಹರಿಯಲು ಹಾಗೂ ರಸ್ತೆ ಬದಿ ಹುಲ್ಲು ತೆರವಿಗೆ ಸೂಚಿಸಿದರು.


ಕಂದಾಯ ಇಲಾಖೆ ಅಧಿಕಾರಿಗಳು ಮಳೆಗಾಲದ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರ ಆಸ್ತಿ ಪಾಸ್ತಿಗಳು ನಷ್ಟ ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತಕ್ಕೆ ಹಾನಿ ವರದಿ ನೀಡಿ ಗರಿಷ್ಠ ಪರಿಹಾರ ಒದಗಿಸಲು ಸಹಕರಿಸಬೇಕು ಎಂದರು.


ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಟೆಂಡರ್ ಅಂತಿಮಗೊಂಡಿರುವ ಮೂಲ ಸೌಕರ್ಯ ಕಾಮಗಾರಿಗಳನ್ನು ಮಳೆಗಾಲ ಆರಂಭಕ್ಕೂ ಮುನ್ನ ಪ್ರಾರಂಭ ಮಾಡುವಂತೆ ಸೂಚಿಸಿದರು.


ಕಲ್ಸಂಕ ಜಂಕ್ಷನ್ ಬಳಿ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಹಾಗೂ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ವಿಶೇಷ ಮುತುವರ್ಜಿ ವಹಿಸಲು ತಿಳಿಸಿದರು.


ನಗರಸಭೆ ಮೂಲಕ ತುರ್ತು ಸಂದರ್ಭದಲ್ಲಿ ವಿಶೇಷ ಕಾರ್ಯಾಚರಣೆಗೆ ಸಿಬ್ಬಂದಿಗಳ ತಂಡ ರಚಿಸಿ, ಕಾರ್ಯಾಚರಣೆಗೆ ಪೂರಕ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಸೂಚನೆ ನೀಡಿ, ತುರ್ತು ಸಂದರ್ಭದಲ್ಲಿ ಮಾಹಿತಿ ನೀಡಲು ನಗರಸಭೆ ಮೂಲಕ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಂ ಆರಂಭಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.


ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ನಗರಸಭೆ ಸದಸ್ಯರು, ಆರೋಗ್ಯ, ಸಣ್ಣ ನೀರಾವರಿ, ಅರಣ್ಯ,  ಲೋಕೋಪಯೋಗಿ, ಮೆಸ್ಕಾಂ, ಕಂದಾಯ ಇಲಾಖೆಯ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು.

Ads on article

Advertise in articles 1

advertising articles 2

Advertise under the article