
ಮೇ 3: ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ
Thursday, May 1, 2025
ಲೋಕಬಂಧು ನ್ಯೂಸ್
ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಮೇ 3ರಂದು ಶನಿವಾರ ಸಂಜೆ ಗಂಟೆ 6.48ರ ಗೋಧೂಳಿಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.
ಈಗಾಗಲೆ 90ಕ್ಕೂ ಮಿಕ್ಕಿ ವಧೂ-ವರರು ಹೆಸರು ನೋಂದಾಯಿಸಿದ್ದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ ಮತ್ತು ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಪೂರೈಸಲಾಗಿದೆ.
ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ. ಜಯಚಂದ್ರ, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸುವರು.
ಒಂದೇ ಒಂದು ವಿಚ್ಛೇದನೆ ಇಲ್ಲ
ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚ ತಡೆಯುವ ಉದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ 88 ಜೊತೆ ವಿವಾಹದೊಂದಿಗೆ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷವೂ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಸುತ್ತಿದ್ದು, ಕಳೆದ ವರ್ಷದ ವರೆಗೆ 12,900 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು ಸುಖ-ಶಾಂತಿ, ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇಲ್ಲಿಯ ವರೆಗೆ ಒಂದೂ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಮಾದರಿ ಅನುಸರಣೆ
ಸರ್ಕಾರ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮೊದಲಾದ ಸ್ವಯಂ-ಸೇವಾ ಸಂಸ್ಥೆಗಳು ಹಾಗೂ ಕಟೀಲು, ಸುಬ್ರಹ್ಮಣ್ಯ ಮೊದಲಾದ ದೇವಸ್ಥಾನಗಳಲ್ಲಿಯೂ ಧರ್ಮಸ್ಥಳದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ವಿಧಾನವನ್ನು ಮಾದರಿಯಾಗಿ ಮಾನ್ಯತೆ ಮಾಡಿ ಅನುಸರಿಸುತ್ತಿರುವುದರ ಬಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿಶೇಷ ಸಂತಸ ವ್ಯಕ್ತ ಪಡಿಸಿದ್ದಾರೆ.
ಸಂಪ್ರದಾಯದಂತೆ ಮದುವೆ
ಉಚಿತ ಸಾಮೂಹಿಕ ವಿವಾಹ ಸಮಾರಂಭ ಶನಿವಾರ ಸಂಜೆ 6.48ರ ರ ಗೋಧೂಳಿಲಗ್ನ ಸುಮುಹೂರ್ತದಲ್ಲಿ ಎಲ್ಲಾ ಜಾತಿಯವರ ಸಂಪ್ರದಾಯದಂತೆ ಅಮೃತವರ್ಷಿಣಿ ಸಭಾಭವದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುವುದು.
ಶುಕ್ರವಾರವೇ ವಧೂ-ವರರು ಹಾಗೂ ಅವರ ಹಿರಿಯರು ಧರ್ಮಸ್ಥಳಕ್ಕೆ ಆಗಮಿಸಲಿದ್ದು ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅವರು ನೀಡಿದ ಪ್ರಮಾಣಪತ್ರ ಹಾಗೂ ದಾಖಲೆಗಳ ಮೂಲಪ್ರತಿಗಳನ್ನು ಪರಿಶೀಲಿಸಿ ಎಲ್ಲವೂ ಕ್ರಮಬದ್ಧವಾಗಿದ್ದಲ್ಲಿ ಅವರಿಗೆ ಮದುವೆಯಾಗಲು ಅವಕಾಶ ನೀಡಲಾಗುವುದು.
ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಶನಿವಾರ ಬೆಳಿಗ್ಗೆಯಿಂದಲೇ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮೂಗುತಿ ವಿತರಿಸುವರು. ಮಂಗಳಸೂತ್ರವನ್ನು ವಿವಾಹದ ಶುಭ ಮುಹೂರ್ತದಲ್ಲಿ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ ಹಾಗೂ ಅತಿಥಿಗಳು ವಿತರಿಸಿ ಶುಭ ಹಾರೈಸುವರು.
ಶನಿವಾರ ಅಪರಾಹ್ನ 4 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳುವರು.
ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆ ವಿತರಣೆಯೊಂದಿಗೆ 6.48ರ ಶುಭ ಮುಹೂರ್ತದಲ್ಲಿ ಹಾರ ವಿನಿಮಯ, ಮಾಂಗಲ್ಯಧಾರಣೆ ನಡೆಯಲಿದೆ. ಹೆಗ್ಗಡೆ ಹಾಗೂ ಅತಿಥಿಗಳು ನೂತನ ದಂಪತಿಗಳಿಗೆ ಶುಭ ಹಾರೈಸಿದ ಬಳಿಕ ನೂತನ ದಂಪತಿಗಳು ದಾಂಪತ್ಯ ದೀಕ್ಷೆ ಸ್ವೀಕರಿಸುವರು.
ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಸವಿದು ದಂಪತಿಗಳು ಊರಿಗೆ ತೆರಳುವರು.
ಸರ್ಕಾರದ ನಿಯಮದಂತೆ ವಿವಾಹ ನೋಂದಣಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಅಧಿಕೃತ ವಿವಾಹ ನೋಂದಣಿ ಪ್ರಮಾಣಪತ್ರವನ್ನು ದಂಪತಿಗಳಿಗೆ ನೀಡಲಾಗುವುದು.