ಮೇ 5ರಿಂದ ಮನೆ ಮನೆ ಸಮೀಕ್ಷೆ
Friday, May 2, 2025
ಲೋಕಬಂಧು ನ್ಯೂಸ್
ಉಡುಪಿ: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾ. ಎಚ್.ಎನ್. ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪ.ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಶೇಖರಿಸಲು ಸರ್ಕಾರ ಆದೇಶಿಸಿದ್ದು, ಜಿಲ್ಲೆಯಲ್ಲಿ ಮೇ 5ರಿಂದ 17ರ ವರೆಗೆ ಶಾಲಾ ಶಿಕ್ಷಕರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 19ರಿಂದ 21ರ ವರೆಗೆ ಕುಟುಂಬಗಳ ಮಾಹಿತಿ ಸಂಗ್ರಹಕ್ಕಾಗಿ ವಿಶೇಷ ಶಿಬಿರ ಆಯೋಜಿಸಲಾಗುವುದು. ಆ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉಡುಪಿ, ಕಾಪು ಮತ್ತು ಕಾರ್ಕಳ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ ತಾಲೂಕುಗಳಿಗೆ ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಸಮೀಕ್ಷೆ ಕಾರ್ಯ ಕೈಗೊಳ್ಳಲು 1,112 ಬೂತ್ ಗಳಲ್ಲಿ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. ಮೇಲ್ವಿಚಾರಣೆಗೆ 112 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ಆಧಾರ್ ಕಾರ್ಡ್ ಅತೀ ಅಗತ್ಯವಾಗಿದ್ದು, ಕುಟುಂಬದ ಸದಸ್ಯರಲ್ಲಿ ಆಧಾರ್ ಇಲ್ಲದಿದ್ದರೆ ಕೂಡಲೇ ನೋಂದಣಿ ಮಾಡಿಕೊಳ್ಳಬೇಕು. ಅದರೊಂದಿಗೆ ರೇಶನ್ ಕಾರ್ಡ್ ಕೂಡ ನೀಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣ ಸ್ವಾಮಿ ಇದ್ದರು.