-->
ಧರ್ಮಸ್ಥಳದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಸತಿಪತಿಯರಾದ 75 ಜೋಡಿ

ಧರ್ಮಸ್ಥಳದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಸತಿಪತಿಯರಾದ 75 ಜೋಡಿ

ಲೋಕಬಂಧು ನ್ಯೂಸ್
ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶನಿವಾರ ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 75 ಜೊತೆ ವಧೂ-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.
ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.
ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆಯೊಂದಿಗೆ ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಹಾರ ವಿನಿಮಯ ಮತ್ತು ಮಾಂಗಲ್ಯ ಧಾರಣೆ ನಡೆಯಿತು. ಅವರವರ ಜಾತಿ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.
ಸುಶ್ರಾವ್ಯವಾದ ಶೋಭಾನೆ ಹಾಡು, ವಧು-ವರರಿಗೆ ಆರತಿ ಕಾರ್ಯಕ್ರಮ ಮದುವೆಗೆ ವಿಶೇಷ ಸೊಬಗು ನೀಡಿತು.


ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ನೂತನ ದಂಪತಿಗಳಿಗೆ ಶುಭ ಹಾರೈಸಿ, ಸರಳ ಸಾಮೂಹಿಕ ವಿವಾಹ ಅತ್ಯಂತ ಪುಣ್ಯದ ಸೇವೆ ಎಂದರು.


ನಾಡಿನೆಲ್ಲೆಡೆ ಬಹುಮುಖಿ ಸಮಾಜಸೇವಾ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿಯೂ ಹಣದ ಮಿತ ಬಳಕೆ, ಉಳಿತಾಯ ಹಾಗೂ ಸಮರ್ಪಕ ಹೂಡಿಕೆ ಬಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾಡುತ್ತಿರುವ ಸೇವೆ ಹಾಗೂ ಸಾಧನೆ ಶ್ಲಾಘನೀಯ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.


ಸರಳ ಸಾಮೂಹಿಕ ವಿವಾಹ ಅತ್ಯಂತ ಪುಣ್ಯದ ಕಾಯಕವಾಗಿದೆ. ಕಳೆದ 52 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ 12,900 ಜೊತೆ ವಿವಾಹವಾಗಿದ್ದು, ಸುಖ ಶಾಂತಿ ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದರು.


ತಾನು ಕಾನೂನು ಸಚಿವನಾಗಿದ್ದಾಗ ಸರಳ ಸಾಮೂಹಿಕ ವಿವಾಹ ಪದ್ಧತಿ ಜಾರಿಗೆ ತರಲು ಕಾನೂನು ರೂಪಿಸಿದ್ದೆ. ಆದರೆ, ಸಚಿವ ಸಂಪುಟದಲ್ಲಿ ಹಾಗೂ ಇತರರು ಕೂಡಾ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ತಾನು ವಿಫಲನಾದೆ ಎಂದು ವಿಷಾದ ವ್ತಕ್ತಪಡಿಸಿದರು.


ಶುಭಾಶಂಸನೆಗೈದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಸನಾತನ ಪರಂಪರೆಯಲ್ಲಿ ಷೋಡಶ ಸಂಸ್ಕಾರಗಳಲ್ಲಿ ಮದುವೆ ಭಾವನಾತ್ಮಕ ಸಂಬಂಧ ಹೊಂದಿದೆ. ಈ ಪವಿತ್ರ ಸಂಸ್ಕಾರ ಪಡೆದ ಪತಿ-ಪತ್ನಿಯರು ಸಮಾನವಾಗಿ ಸುಖ-ಕಷ್ಟ, ನೋವು-ನಲಿವು ಎಲ್ಲವನ್ನೂ ಶಾಂತಿ ಮತ್ತು ತಾಳ್ಮೆಯಿಂದ ಅನುಭವಿಸಿ ಧನ್ಯತಾಭಾವ ಹೊಂದಿರಬೇಕು. ಸಾರ್ಥಕ ಜೀವನ ನಡೆಸಬೇಕು ಎಂದರು.


ವಧು ಪ್ರಮಾಣ ವಚನ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ವಧು ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮಗಳಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಯಾವುದೇ ದುರಭ್ಯಾಸಗಳಿಗೂ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ವಚನ ಬದ್ಧರಾಗುತ್ತಿದ್ದೇವೆ ಎಂದು ವಧು ವರರು ಪ್ರಮಾಣವಚನ ಸ್ವೀಕರಿಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಆದವರು ದುಂದುವೆಚ್ಚ ಮಾಡಬಾರದು. ಸತ್ಕಾರಕೂಟ, ನಿಶ್ಚಿತಾರ್ಥ, ಅತಿಥಿ ಸತ್ಕಾರಕ್ಕೆಂದು ಅನಗತ್ಯ ವೆಚ್ಚ ಮಾಡಬಾರದು ಎಂದು ಸಲಹೆ ನೀಡಿದರು.


ಸಾಮೂಹಿಕ ವಿವಾಹ ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು ತಮಗೆ ಧನ್ಯತಾಭಾವ ಮೂಡಿಬಂದಿದೆ. ಅನೇಕ ದಾನಿಗಳು ನಗದು ದೇಣಿಗೆ, ಮಂಗಳಸೂತ್ರ, ಮೂಗುತಿ, ಸೀರೆ ಮೊದಲಾದವುಗಳನ್ನು ಉಚಿತ ಸಾಮೂಹಿಕ ವಿವಾಹಕ್ಕೆ ಕೊಡುಗೆಯಾಗಿ ನೀಡಿ ಪುಣ್ಯಭಾಗಿಗಳಾಗಿದ್ದಾರೆ ಎಂದು ಹೆಗ್ಗಡೆ ಸಂತಸ ವ್ಯಕ್ತಪಡಿಸಿದರು.


ಧರ್ಮಸ್ಥಳದ ವತಿಯಿಂದ ನೂತನ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಲಾಯಿತು.


ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾ ಅಮಿತ್, ಅಮಿತ್ ಉಪಸ್ಥಿತರಿದ್ದರು.


ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅಖಿಲೇಶ್ ಶೆಟ್ಟಿ ಧರ್ಮಸ್ಥಳ ಧನ್ಯವಾದವಿತ್ತರು. ಎಸ್.ಡಿ.ಎಂ. ಸನಿವಾಸ ಕಾಲೇಜಿನ ಪ್ರಾಂಶುಪಾಲ ಡಾ. ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article