
ವೇದದ ಸಾರ ಜಗತ್ತಿಗೆ ಸಾರಿದ ಆಚಾರ್ಯ ಶಂಕರರು
Friday, May 2, 2025
ಲೋಕಬಂಧು ನ್ಯೂಸ್
ಉಡುಪಿ: ಸಮಾಜದ ಏಳಿಗೆಗಾಗಿ ಹಾಗೂ ಧರ್ಮದ ರಕ್ಷಣೆಗಾಗಿ ದೇಶದಾದ್ಯಂತ ಸಂಚರಿಸಿ, ವೇದದ ಸಾರವನ್ನು ಜಗತ್ತಿಗೆ ಸಾರಿರುವ ಶ್ರೀ ಶಂಕರಾಚಾರ್ಯರ ಜೀವನ, ಸಾಧನೆ ಪ್ರತಿಯೊಬ್ಬರಿಗೂ ದಾರಿದೀಪ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅದ್ವೈತ ಮತ ಪ್ರತಿಪಾದಕ ಆದಿ ಶಂಕರಾಚಾರ್ಯರು, ನಂಬಿಕೆ ಮತ್ತು ಸಮಗ್ರತೆ ಕ್ಷೀಣಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಆಧ್ಯಾತ್ಮಿಕ ಪರಂಪರೆಗೆ ರಕ್ಷಣೆ ನೀಡಿದವರು. ಮನುಷ್ಯ ತನ್ನನ್ನು ತಾನು ಅರಿತುಕೊಂಡು ಸಮಾಜ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹೊಂದಾಣಿಕೆಯ ಜೀವನ ನಡೆಸುವುದರೊಂದಿಗೆ ಸಮಾಜದ ಅಭಿವೃದ್ಧಿ ಸಾಧಿಸಬಹುದಾದ ದಾರಿಯನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀನಿವಾಸ ರಾವ್ ಮಾತನಾಡಿ, ಅದ್ವೈತ ಸಿದ್ಧಾಂತ ಪ್ರತಿಪಾದನೆ ಮಾಡಿದ ಆಧ್ಯಾತ್ಮಿಕ ಗುರು ಶಂಕರಾಚಾರ್ಯರು. ಅತ್ಯಂತ ಕಡಿಮೆ ಜೀವತಾವಧಿಯಲ್ಲಿ ಮಹಾನ್ ಸಾಧನೆ ಮಾಡಿದ ಅವರು ಎಲ್ಲಾ ಜಾತಿ, ಧರ್ಮದವರು ಒಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಎಸ್. ಶಾಸ್ತ್ರೀ ಉಪನ್ಯಾಸ ನೀಡಿ, ಕೇರಳದ ಕಾಲಟಿಯಲ್ಲಿ ಜನಿಸಿದ ಶಂಕರರು ಸನಾತನ ಹಿಂದೂ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಕೇವಲ ಮೂವತ್ತೆರೆಡು ವರ್ಷ ಜೀವಿಸಿದ ಶಂಕರರು, ಇಡೀ ದೇಶದ ಕ್ಷೇಮ ಹಾಗೂ ಅನೇಕ ಅನುಯಾಯಿಗಳು, ಶಿಷ್ಯರನ್ನು ಸಂಪಾದಿಸಿದ್ದಾರೆ ಎಂದರು.
ಬಾಲ್ಯದಲ್ಲಿಯೇ ನಾಲ್ಕು ವೇದಗಳಲ್ಲಿ ಪರಿಣಿತರಾಗಿದ್ದ ಶಂಕರರು, ತಮ್ಮ ಹದಿನಾರನೇ ವರ್ಷದಲ್ಲಿ ಶಾಸ್ತ್ರ ರಚನೆ ಮಾಡುವುದರೊಂದಿಗೆ, ಪ್ರಪ್ರಥಮವಾಗಿ ವೇದಗಳಲ್ಲಿನ ಉಪನಿಷತ್ತು, ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನ ಮಾಡಿದ್ದರು. ಜನಸಾಮಾನ್ಯರಿಗೆ ಭಕ್ತಿ, ಜ್ಞಾನ ಮತ್ತು ಕರ್ಮ ಸಿದ್ಧಾಂತವನ್ನು ಬೋಧಿಸುವ ಮೂಲಕ ಶ್ಲೋಕಗಳು ಹಾಗೂ ಉಪನಿಷತ್ತುಗಳನ್ನು ಅಂದಿನ ಕಾಲದ ಸುಲಭ ಭಾಷೆಯಾದ ಸಂಸ್ಕೃತದಲ್ಲಿ ಬೋಧಿಸಿದ್ದಾರೆ.
ದೇಶದ ನಾಲ್ಕು ದಿಕ್ಕುಗಳಲ್ಲಿ ಮಠ ಸ್ಥಾಪಿಸಿ, ಜ್ಞಾನವೊಂದೇ ಮೋಕ್ಷದ ಮಾರ್ಗ ಎಂದು ಉಪದೇಶ ಮಾಡಿದ್ದಾರೆ. ಅವರು, ರಾಷ್ಟ್ರದ ಏಕೀಕರಣದಲ್ಲಿ ಪ್ರಪ್ರಥಮ ಪ್ರಯತ್ನ ಮಾಡಿದವರು ಶಂಕರಾಚಾರ್ಯರು ಎಂದರು.
ನಗರಸಭಾ ಸದಸ್ಯ ಮಂಜುನಾಥ್ ಶೆಟ್ಟಿಗಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಂಕರ ತತ್ವ ಪ್ರಸಾರ ಅನುಯಾಯಿಗಳು, ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ತೇಜೇಶ್ ಬಂಗೇರ ನಿರೂಪಿಸಿದರು. ವಿಶ್ವನಾಥ ಶ್ಯಾನುಭೋಗ್ ವಂದಿಸಿದರು.