ತಂದೆ ಅಂತ್ಯಕ್ರಿಯೆಯಲ್ಲಿ ಬನ್ನಂಜೆ ರಾಜಾ ಭಾಗಿ
Sunday, May 4, 2025
ಲೋಕಬಂಧು ನ್ಯೂಸ್
ಉಡುಪಿ: ಹೈಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಮಲ್ಪೆಯಲ್ಲಿ ನಡೆದ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾನುವಾರ ಪಾಲ್ಗೊಂಡ ಬೆಳಗಾವಿಯ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜನನ್ನು ಹೈಕೋರ್ಟ್ ಅನುಮತಿಯ ಮೇರೆಗೆ ಪೊಲೀಸರು ಶನಿವಾರ ರಾತ್ರಿ ಪೆರೋಲ್ ನಲ್ಲಿ ಉಡುಪಿಗೆ ಕರೆತಂದಿದ್ದಾರೆ.ಏ.27ರಂದು ನಿಧನರಾದ ತಂದೆ, ನಿವೃತ್ತ ತಹಶೀಲ್ದಾರ್ ಎಂ.ಸುಂದರ್ (88) ಅವರ ಅಂತಿಮ ಸಂಸ್ಕಾರ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಪೆರೋಲ್ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ.ಅರ್ಜಿಯನ್ನು ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಮಾನ್ಯ ಮಾಡಿ, ಆತನಿಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ ಮೇ 3ರಿಂದ ಮೇ 14ರ ವರೆಗೆ ಪೆರೋಲ್ ನೀಡಿತ್ತು.
ಅದರಂತೆ ಪೊಲೀಸರು ಆತನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಲ್ಪೆ ಕಲ್ಮಾಡಿಯ ಸಸಿತೋಟ ಎಂಬಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಆತ ತಂದೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ. ಬಳಿಕ ಮಲ್ಪೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಭೂಗತನಾಗಿದ್ದ ಬನ್ನಂಜೆ ರಾಜನನ್ನು 2015ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಮೊರಕ್ಕೊದಲ್ಲಿ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಕಾರವಾರ ಕೊಲೆ ಪ್ರಕರಣ, ಉಡುಪಿ ಐರೋಡಿ ಜ್ಯುವೆಲ್ಲರ್ಸ್ ಶೂಟೌಟ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬನ್ನಂಜೆ ರಾಜ, ಒಟ್ಟು 23 ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಅಂಕೋಲದ ಉದ್ಯಮಿ ಆರ್.ಎನ್ ನಾಯಕ ಕೊಲೆ ಪ್ರಕರಣ ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದ್ದು, ಅದರಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ 10 ವರ್ಷಗಳಿಂದ ಬೆಳಗಾವಿಯ ಜೈಲಿನಲ್ಲಿದ್ದಾನೆ.
ಪೆರೋಲ್ ನಲ್ಲಿ ಬಿಡುಗಡೆಯಾಗಿರುವ ಬನ್ನಂಜೆ ರಾಜಾ, ಈ ಅವಧಿಯಲ್ಲಿ ಸಹಚರರರೊಂದಿಗೆ ಸೇರಿ ಯಾವುದೇ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಮೊಬೈಲ್, ಇಂಟರ್ನೆಟ್ ಬಳಸುವಂತಿಲ್ಲ. ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. ತಂದೆಯ ಅಂತ್ಯಸಂಸ್ಕಾರದಲ್ಲಿ ಮಾತ್ರ ಭಾಗಿಯಾಗಬೇಕು ಸೇರಿದಂತೆ ಹಲವು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಮೇ 14ರಂದು ಆತನನ್ನು ಮತ್ತೆ ಬೆಳಗಾವಿ ಜೈಲಿಗೆ ಕರೆದೊಯ್ಯಲಾಗುವುದು ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದ್ದಾರೆ.