ಲೋಕಬಂಧು ನ್ಯೂಸ್ | ಪಡುಬಿದ್ರಿ, ಜೂ.25
ಸಮುದಾಯ ಕಲ್ಯಾಣ ಮತ್ತು ಮಾನವೀಯ ಸೇವೆಯ ಬದ್ಧತೆಯೊಂದಿಗೆ ಅದಾನಿ ಪವರ್ ಲಿಮಿಟೆಡ್- ಉಡುಪಿ ಟಿಪಿಪಿ ವತಿಯಿಂದ ಸಾಮಾಜಿಕ ಹೊಣೆಗಾರಿಗೆ ಜವಾಬ್ದಾರಿ (ಸಿಎಸ್ಆರ್) ಕಾರ್ಯಕ್ರಮದಡಿ `ಗೋ-ರೆಡ್' ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರ ಅದಾನಿ ಸಮೂಹದ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ 64ನೇ ಜನ್ಮದಿನ ಅಂಗವಾಗಿ ಬುಧವಾರ ಎಲ್ಲೂರಿನಲ್ಲಿರುವ ಸ್ಥಾವರದಲ್ಲಿ ಆಯೋಜಿಸಲಾಯಿತು.
ರಕ್ತದಾನ ಶಿಬಿರ ಉದ್ಘಾಟಿಸಿದ ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಶರತ್ ಕುಮಾರ್, ಅದಾನಿ ಸಮೂಹದ ಕಾರ್ಯವನ್ನು ಶ್ಲಾಘಿಸಿ ರಕ್ತದಾನ ಶಿಬಿರದಿಂದ ಉಡುಪಿ ಮತ್ತು ಮಂಗಳೂರು ಜಿಲ್ಲಾಸ್ಪತ್ರೆಗಳ ರಕ್ತನಿಧಿಗಳಿಗೆ ಹೆಚ್ಚಿನ ಸಹಕಾರವಾಗಲಿದೆ ಎಂದರು.
ಅಜ್ಜರಕಾಡು ಜಿಲ್ಲಾಸ್ಪತ್ರೆ ರಕ್ತನಿಧಿ ಮುಖ್ಯಸ್ಥೆ ಡಾ.ವೀಣಾಕುಮಾರಿ ಇದ್ದರು.
ಅದಾನಿ ಸಮೂಹ ಕರ್ನಾಟಕ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಜೂ.24 ಅದಾನಿ ಕುಟುಂಬಕ್ಕೆ ವಿಶೇಷ ಮಹತ್ವದ ದಿನವಾಗಿದ್ದು, ದೇಶಾದ್ಯಂತ ಇರುವ ಅದಾನಿ ಸಮೂಹದ ಎಲ್ಲಾ ಘಟಕಗಳಲ್ಲಿ ಗೌತಮ್ ಅದಾನಿ ಜನ್ಮದಿನವನ್ನು ಮಾನವೀಯ ಸೇವೆಯ ಸಂಕೇತವಾಗಿ 'ಗೋ-ರೆಡ್' ಕಾರ್ಯಕ್ರಮದ ಮೂಲಕ ಸಾವಿರಾರು ನೌಕರರು ಒಂದಾಗಿ ರಕ್ತದಾನ ಮಾಡುತ್ತಾರೆ.
ರಕ್ತದಾನ ಮಾನವೀಯತೆಯ ಶ್ರೇಷ್ಠ ಅಭಿವ್ಯಕ್ತಿಗಳಲ್ಲಿ ಒಂದಾಗಿದ್ದು, ಆರೋಗ್ಯಕರ ಮತ್ತು ಕಾಳಜಿಯುಳ್ಳ ಸಮಾಜ ನಿರ್ಮಾಣಕ್ಕೆ ಕೊಡುಗೆಯನ್ನು ಬಲಪಡಿಸುತ್ತದೆ ಎಂದರು.
ವ್ಯಾವಹಾರಿಕ ಯಶಸ್ಸಿನಾಚೆಗೆ ಸುತ್ತಮುತ್ತಲಿನ ಸಮುದಾಯಗಳ ಜೀವನದಲ್ಲಿ ಸಕಾರತ್ಮಕ ಬದಲಾವಣೆ ತರಲು ಅದಾನಿ ಸಮೂಹದ ಬದ್ಧತೆ ಸದಾ ಮುಂದುವರಿಯುತ್ತದೆ ಎಂದರು.
ಅದಾನಿ ಸಿಬ್ಬಂದಿ ವರ್ಗ, ಗುತ್ತಿಗೆ ಕಾರ್ಮಿಕರು ಮೊದಲಾದವರು ಭಾಗವಹಿಸಿದ್ದರು. ಒಟ್ಟು 206 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
