ಲೋಕಬಂಧು ನ್ಯೂಸ್ | ಕಾಪು, ಏ.10
ತಿರುಮಲ ತಿರುಪತಿ ದೇವಸ್ಥಾನದ ನೇತೃತ್ವದಲ್ಲಿ ಕೆ.ಕೃಷ್ಣಮೋಹನ್ ಪೈ ಯುಎಸ್ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ ಮತ್ತು ಪುರುಷೋತ್ತಮ ಪೈ ಹಾಗೂ ಕುಟುಂಬಿಕರ ವತಿಯಿಂದ ಕಟಪಾಡಿ ಎಸ್.ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘಸಂಸ್ಥೆಗಳು, ದೈವಸ್ಥಾನ, ಭಜನಾ ಮಂದಿರಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬಂದಿಗಳ ಸಹಕಾರದೊಂದಿಗೆ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಏ.11ರಂದು ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ನಡೆಯಲಿದೆ.
ತಿರುಪತಿಯಿಂದಲೇ ದೇವರನ್ನು ತಂದು ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕರಿಂದಲೇ ಕಲ್ಯಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿದ್ದು, ಅಪರಾಹ್ನ 3.30ಕ್ಕೆ ಕಟಪಾಡಿ ಪೇಟೆಯಲ್ಲಿ ಶ್ರೀನಿವಾಸ ದೇವರನ್ನು ಸ್ವಾಗತಿಸಿ, ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪ ವೇದಿಕೆಗೆ ಭವ್ಯ ಮೆರವಣಿಗೆಯೊಂದಿಗೆ ಕರೆತರಲಾಗುವುದು ಎಂದು ಕೆ.ಸತ್ಯೇಂದ್ರ ಪೈ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಜೆ 5ರಿಂದ ಶ್ರೀದೇವರ ವಿವಾಹ ಮಂಟಪ ಪ್ರವೇಶ, ವಿವಾಹ ಮಂಟಪಕ್ಕೆ ಶ್ರೀಪದ್ಮಾವತೀ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ಮಾಲಾ ಧಾರಣೆ ನಡೆದು 6.25ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀನಿವಾಸ ದೇವರಿಗೆ ಪದ್ಮಾವತೀ ದೇವಿಯ ಕನ್ಯಾದಾನ, ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚರಣೆ ಮಹಾಪ್ರಸನ್ನ ಪೂಜೆ ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ದೇವರ ದರ್ಶನ ಭಾಗ್ಯ
ನಮ್ಮೂರಿನಲ್ಲೇ ತಿರುಪತಿ ದೇವರ ದರ್ಶನ ಪಡೆಯಲು ಇದೊಂದು ಅಪೂರ್ವ ಅವಕಾಶವಾಗಿದ್ದು, ತಿರುಪತಿಗೆ ಹೋಗಲು ಸಾಧ್ಯವಾಗದವರಿಗೆ ಇಲ್ಲಿಯೇ ತಿರುಪತಿ ದೇವರ ದರ್ಶನ ಪಡೆಯಬಹುದಾಗಿದೆ. ತಿರುಪತಿ ದೇವಸ್ಥಾನಕ್ಕೆ ಕಾಣಿಕೆ ಕೊಡುವವರಿಗೆ ಇಲ್ಲಿಯೇ ತಿರುಪತಿ ದೇವಸ್ಥಾನದ ಹುಂಡಿಗೆ ಹಣ ನೀಡಲು ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ, ವಿಶೇಷಚೇತನರು ಹಾಗೂ ಅಶಕ್ತ ಹಿರಿಯ ನಾಗರಿಕರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಭಾಗವಹಿಸುವ ಭಕ್ತರಿಗೆ ತಿರುಪತಿಯಿಂದಲೇ ತರಿಸಲಾದ ವಿಶೇಷ ಲಡ್ಡುಪ್ರಸಾದ ಸಹಿತ ಪ್ರಸಾದ ವಿತರಣೆ ನಡೆಯಲಿದೆ.
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳ ವಾಹನ ನಿಲುಗಡೆಗೆ ವಿವಿಧ ಸ್ಥಳಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದ್ದು, ವಾಹನ ನಿಲುಗಡೆ ಸ್ಥಳದಿಂದ ಕಲ್ಯಾಣ ಮಂಟಪಕ್ಕೆ ಆಗಮಿಸಲು ಉಚಿತವಾಗಿ ಬದಲಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಕಲ್ಯಾಣೋತ್ಸವ ಸಮಿತಿಯ ವೆಬ್ 'ಸೈಟ್ https://www.katapadykalyanotsava.com/ ನಲ್ಲಿ ವಿವರ ಲಭ್ಯವಿದೆ.
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಯಾರಿಂದಲೂ ಯಾವುದೇ ರೀತಿಯ ಧನಸಹಾಯ ಸ್ವೀಕರಿಸಲಾಗುವುದಿಲ್ಲ. ಆದರೆ, ಶ್ರೀವೆಂಕಟರಮಣ ದೇವರಿಗೆ ಹೂ ಹಣ್ಣು ಹಾಗೂ ತುಳಸಿ ಅರ್ಪಿಸಲು ಅವಕಾಶ ಕಲ್ಪಿಸಲಾಗಿದ್ದು, ಭಕ್ತಾದಿಗಳು ಅಪರಾಹ್ನ 3ರೊಳಗಾಗಿ ಕಲ್ಯಾಣ ಮಂಟಪದಲ್ಲಿ ನೀಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಮೋಹನ್ ಪೈ, ಭಾಸ್ಕರ ಕಾಮತ್, ಕೆ.ನಾಗೇಶ್ ಕಾಮತ್, ಸುಧಾಕರ್ ಬ್ರಹ್ಮಾವರ ಉಪಸ್ಥಿತರಿದ್ದರು.
