ನಟಿ ರುಕ್ಮಿಣಿ ವಸಂತ್ ಬಿಕಿನಿ ವೀಡಿಯೊ ಕೇಸ್: ಮೂವರು ಆರೋಪಿಗಳು ಲಾಕ್!

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.20
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ್‌ ನಕಲಿ ಬಿಕಿನಿ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಮೂವರು ಕಾಮುಕರನ್ನು ಸೈಬರ್ ಕಮಾಂಡ್ ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ.
ನಟಿಯ ಫೋಟೊ ಹಾಗೂ ವೀಡಿಯೊಗಳು ವೈರಲ್ ಆದ ಬೆನ್ನಲ್ಲೇ ಆ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ತನಿಖೆ ಚುರುಕುಗೊಳಿಸಿದ ಪೊಲೀಸರು ತಾಂತ್ರಿಕ ಆಧಾರದ ಮೇಲೆ ಖದೀಮರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ಬಾಗಲಕೋಟೆ ನಿವಾಸಿ ರವಿಕುಮಾರ್ (24), ಮತ್ತು ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ (33) ಮತ್ತು ರಂಜಿತ್ (25) ಎಂದು ಗುರುತಿಸಲಾಗಿದೆ.


ಈ ಮೂವರು ಆರೋಪಿಗಳು ನಟಿಯ ಘನತೆಗೆ ಕುಂದು ತರುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿತನ ಪ್ರದರ್ಶಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.