ನನಗೂ ಡಿಕೆಶಿಗೂ ಯಾವುದೇ ಸಂಬಂಧ ಇಲ್ಲ

ಲೋಕಬಂಧು ನ್ಯೂಸ್ | ಧರ್ಮಸ್ಥಳ, ಜೂ.26
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನನ್ನೊಂದಿಗೆ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಸನ್ನಿಧಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಕೆಲವು ವಲಯಗಳಿಂದ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಪ್ರಸಂಗ ನನಗೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತ ಮತ್ತು ನೋವು ತಂದಿದೆ ಎಂದರು.


ನಾನು ಭಾವನಾತ್ಮಕ ವ್ಯಕ್ತಿಯಾಗಿರುವುದರಿಂದ ಸತ್ಯಾಸತ್ಯತೆ ಹೊರಬರಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದಲ್ಲಿ ಆಣೆ- ಪ್ರಮಾಣ ಮಾಡಲು ನಿರ್ಧರಿಸಿದ್ದೆ. ಆದರೆ, ಪಕ್ಷದ ಹಿರಿಯ ನಾಯಕರು ಈ ವಿಚಾರವನ್ನು ಪಕ್ಷದ ಒಳಗಡೆಯೇ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಇಂದು ಕೇವಲ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಬಂದಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ತನ್ನ ಸಂಬಂಧದ ಬಗ್ಗೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ನನಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧವಿಲ್ಲ. ಅವರ ಪರವಾಗಿ ನಾನು ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.


ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಮತ್ತು ಪ್ರಸ್ತುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಆ ಹುದ್ದೆಗೆ ಸಲ್ಲಬೇಕಾದ ಗೌರವವನ್ನಷ್ಟೇ ನಾನು ನೀಡುತ್ತಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೂ ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯದು ಮಾಡಲಿ ಎಂದು ವಿಜಯೇಂದ್ರ ಮಾರ್ಮಿಕವಾಗಿ ನುಡಿದರು.
ಅದಕ್ಕೂ ಮುನ್ನ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ವಿಜಯೇಂದ್ರ ಅವರು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.
ಸಂಸದ ಬೃಜೇಶ್ ಚೌಟ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಹರೀಶ ಪೂಂಜಾ, ಗುರುರಾಜ ಗಂಟಿಹೊಳೆ, ಯಶಪಾಲ್ ಸುವರ್ಣ, ರಾಜೇಶ್ ನಾಯಕ್, ಸುರೇಶ್ ಶೆಟ್ಟಿ ಗುರ್ಮೆ ಮತ್ತು ಕಿರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ಮತ್ತು ಕಿಶೋರ್ ಕುಮಾರ್ ಹಾಗೂ ಪಕ್ಷ ಕಾರ್ಯಕರ್ತರಾದ ಜಯಂತ್ ಕೋಟ್ಯಾನ್, ಶ್ರೀನಿವಾಸ ರಾವ್ ಧರ್ಮಸ್ಥಳ ಉಪಸ್ಥಿತರಿದ್ದರು.