ಲೋಕಬಂಧು ನ್ಯೂಸ್ | ಅಯೋಧ್ಯೆ, ಜೂ.26
ಕೋಟಿ ಕೋಟಿ ಹಿಂದೂಗಳ ಶತ- ಶತಮಾನಗಳ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಲೂಟಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಶುಕ್ರವಾರ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಟಿನ್ನೂ ಯಾದವ್ ಸೇರಿದಂತೆ 8 ಮಂದಿಯನ್ನು ಬಂಧಿಸಿದೆ.
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸ್ವೀಕರಿಸಿದ ದೇಣಿಗೆ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಗುರುವಾರ ಅಧಿಕೃತವಾಗಿ ಎಫ್ಐಆರ್ ದಾಖಲಿಸಿತ್ತು.
ಎಂಟು ಮಂದಿ ಆರೋಪಿಗಳಲ್ಲಿ ಚಂಪತ್ ರಾಯ್ ಆಪ್ತ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನೂ ಯಾದವ್ ಸೇರಿದ್ದಾನೆ. ಇತರ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಲವಕುಶ್ ಮಿಶ್ರಾ, ರಾಮ ಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಅವರನ್ನು ಎಸ್ಐಟಿ ಬಂಧಿಸಿದೆ.
8 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯ ಭಾಗವಾಗಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಚಂಪತ್ ರಾಯ್ ಹಾಗೂ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ವಿರುದ್ಧ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.