ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.16
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು ಖಾಕಿ ಕರ್ತವ್ಯ ಮರೆತಿದೆ. ಆ ಬಗ್ಗೆ ಉತ್ತರಿಸಬೇಕಾದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಕಂಠ ಶೋಷಣೆ ಮಾಡಿಕೊಳ್ಳುವ ಪ್ರಯತ್ನವನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಮಾಜಿ ಸಚಿವ ವಿ.ಸುನಿಲ್‌ಕುಮಾರ್ ಸಲಹೆ ನೀಡಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿ, ಕೊಟ್ಟ ಕುದುರೆಯ ಏರಲರಿಯದ ವೀರನಲ್ಲ, ನಿಮ್ಮನ್ನು ಆವರಿಸಿದ ಆರ್‌ಎಸ್‌ಎಸ್ ಪೋಬಿಯಾ ಬಿಡುಗಡೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಪರಿಸ್ಥಿತಿ ಬದಲಾದಾಗ ಮನಃಸ್ಥಿತಿ ಬದಲಾಗುತ್ತದೆ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ, ನಿಮ್ಮ ವಿಚಾರದಲ್ಲಿ ಆ ನಿರೀಕ್ಷೆ ಹುಸಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಮೂರು ವರ್ಷಗಳ ಕಾಲ ನಿಮ್ಮಿಂದ ಏನೂ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಮೂರು ವರ್ಷದಲ್ಲಿ ಎಷ್ಟು ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣ ಮಾಡಿದಿರಿ ಎಂಬ ಪ್ರಶ್ನೆ ರಾಜ್ಯದ ಜನರಿಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿಶೇಷ ಉಪಯೋಜನೆ ಹಣವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಾಗ ಉಸಿರೆತ್ತದ ನೀವು ನಿಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಆರ್‌ಎಸ್‌ಎಸ್ ವಿರುದ್ಧ ನಾಲಗೆ ಹರಿಬಿಡುತ್ತಲೇ ಬಂದಿರಿ.
ಕಲ್ಬುರ್ಗಿ ಜಿಲ್ಲೆಯ ತಲಾದಾಯ ಕ್ಷೀಣಿಸಿದ ಬಗ್ಗೆ, ಕಳಪೆ ಪರೀಕ್ಷಾ ಫಲಿತಾಂಶದ ಬಗ್ಗೆ ನೀವು ಮಾತನಾಡಲೇ ಇಲ್ಲ. ಆದರೆ, ನೀವು ಆರ್‌ಎಸ್‌ಎಸ್ ವಿಚಾರದಲ್ಲಿ ಮಾತ್ರ 'ಮಾತನಾಡುವವನೇ ಮಹಾಶೂರ' ಎಂಬಂತೆ ವರ್ತಿಸುತ್ತಿದ್ದೀರಿ ಎಂದು ಸುನಿಲ್ ಕುಮಾರ್ ಟೀಕಿಸಿದ್ದಾರೆ.
ನೀವೀಗ ರಾಜ್ಯದ ಗೃಹ ಸಚಿವರಾಗಿದ್ದೀರಿ. ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸುವುದಕ್ಕೆ ನಿಮ್ಮ ಮುಂದೆ ಹಲವು ಸವಾಲುಗಳಿವೆ. ಭ್ರಷ್ಟತನದಲ್ಲಿ ಮುಳುಗಿ ಹೋಗಿರುವ ಪೊಲೀಸ್ ಇಲಾಖೆಯನ್ನು ತಹಬದಿಗೆ ತರುವ ಆದ್ಯ ಕರ್ತವ್ಯ ನಿಮ್ಮ ಮೇಲಿದೆ. ಅನ್ಯ ರಾಜ್ಯಗಳಲ್ಲಿ ಕರ್ನಾಟಕ ಪೊಲೀಸ್ ಮಾನ ಹರಾಜಾಗುತ್ತಿದೆ ಎಂದು ಸುನಿಲ್ ಕುಮಾರ್ ಅವರು ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.