ಲೋಕಬಂಧು ನ್ಯೂಸ್ ಮಣಿಪಾಲ, ಜೂ.25
ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ (ಕೆಎಂಸಿ)ಯಲ್ಲಿ ಸಂಕೀರ್ಣವಾದ ಎದೆಯೊಳಗಿನ ಶ್ವಾಸನಾಳ ಕ್ಯಾನ್ಸರ್‌ನ ರೊಬೊಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 36 ವರ್ಷದ ರೋಗಿಯನ್ನು ಅತ್ಯಂತ ಸಂಕೀರ್ಣವಾದ ಈ ಶಸ್ತ್ರಚಿಕಿತ್ಸೆ ನಂತರ ನಾಲ್ಕನೇ ದಿನದಲ್ಲಿ ಬಿಡುಗಡೆ ಮಾಡಲಾಯಿತು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯ ಶ್ವಾಸನಾಳದ ಕೆಳಗಿನ ಭಾಗದಲ್ಲಿ ಗಡ್ಡೆ ಇರುವುದು ಎಂಡೋಸ್ಕೋಪಿಯಿಂದ ಪತ್ತೆಯಾಗಿದ್ದು, ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.
ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ನವೀನ ಕುಮಾರ್ ಎ.ಎನ್. ನೇತೃತ್ವದಲ್ಲಿ ಅರಿವಳಿಕೆ ವಿಭಾಗದವರ ಬೆಂಬಲದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ರೊಬೊಟಿಕ್ ಶಸ್ತ್ರಚಿಕಿತ್ಸೆಯಿಂದ ಶ್ವಾಸನಾಳದ ಕವಲೊಡೆಯುವಿಕೆಯ ಮೇಲಿರುವ ಗಡ್ಡೆಯಿಂದ ಹಾನಿಗೊಳಗಾದ ಶ್ವಾಸನಾಳದ ಕೆಳಗಿನ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿ ನಂತರ ಶ್ವಾಸನಾಳದ ಆರೋಗ್ಯಕರ ತುದಿಗಳನ್ನು ಸೇರಿಸುವ ಮೂಲಕ ಶ್ವಾಸನಾಳದ ಪುನರ್ ನಿರ್ಮಾಣವನ್ನು ಯಶಸ್ವಿಯಾಗಿ ಮಾಡಲಾಯಿತು.
ಶ್ವಾಸಕೋಶದ ಆಮ್ಲಜನಕವನ್ನು ನಿರಂತರ ಕಾಯ್ದುಕೊಳ್ಳುವ ಮತ್ತು ಶಸ್ತ್ರಚಿಕಿತ್ಸೆಯುದ್ದಕ್ಕೂ ಶ್ವಾಸನಾಳದೊಳಗೆ ವೆಂಟಿಲೇಟರ್ ಕೊಳವೆ ಇಟ್ಟುಕೊಂಡು ನಡೆಸುವ ರೊಬೊಟಿಕ್ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಸವಾಲಿನದ್ದಾಗಿದ್ದು, ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆ, ಆ ಕಾರಣದ ನೋವು, ಚೇತರಿಕೆಗೆ ದೀರ್ಘ ಸಮಯ ಮತ್ತು ಎದ್ದುಕಾಣುವ ದೊಡ್ಡ ಗಾಯದ ಗುರುತು ಇತ್ಯಾದಿಗಳಿಗೆ ವಿರುದ್ಧವಾಗಿ ಪರಿಣಾಮಕಾರಿ ರೊಬೊಟಿಕ್ ಶಸ್ತ್ರಚಿಕಿತ್ಸೆಯಿಂದಾಗಿ ರೋಗಿ ಬೇಗನೆ ಚೇತರಿಸಿಕೊಂಡು, ನಾಲ್ಕನೇ ದಿನದಲ್ಲಿ ಬಿಡುಗಡೆ ಮಾಡಲಾಯಿತು.
ಶಸ್ತ್ರಚಿಕಿತ್ಸಾ ತಂಡದಲ್ಲಿ ಸರ್ಜಿಕಲ್ ಆ್ಯಂಕೊಲಜಿ ವಿಭಾಗದ ಡಾ.ನವೀನ ಕುಮಾರ್ ಜೊತೆ ಡಾ.ನವಾಜ್ ಉಸ್ಮಾನ್, ಡಾ.ಅಖಿಲ್ ಪಲೋದ್, ಡಾ.ಅನಂತ್ ಬಾಲಕೃಷ್ಣನ್ ಮತ್ತು ಡಾ.ಪ್ರೀತಿ ಸಹಕರಿಸಿದ್ದರು. ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ ಡಾ.ಅನಿತಾ ಎನ್ ಮತ್ತು ಡಾ.ಶ್ರೇಯಾ ಇದ್ದರು.
ವೈದ್ಯರ ಈ ಸಾಧನೆಯನ್ನು ಮಾಹೆ ಬೋಧನಾ ಆಸ್ಪತ್ರೆಗಳ ಸಿಓಓ ಡಾ.ಸುಧಾಕರ್ ಕಂಟಿಪುಡಿ ಅಭಿನಂದಿಸಿದ್ದಾರೆ.
.jpg)
.jpg)