ಯಶೋ ಮಾಧ್ಯಮ ಪ್ರಶಸ್ತಿಗೆ ಸುಜಿ ಕುರ್ಯ ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.14
ಬೆಂಗಳೂರು ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಪ್ರತೀ ವರ್ಷ ಉಡುಪಿ ಜಿಲ್ಲೆಯ ಓರ್ವ ಪತ್ರಕರ್ತರಿಗೆ ನೀಡುವ ಯಶೋ ಮಾಧ್ಯಮ ಪ್ರಶಸ್ತಿಗೆ ಈ ಬಾರಿ ಉಡುಪಿ ಜಿಲ್ಲಾ ಪತ್ರಕರ್ತರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಸುಬ್ರಮಣ್ಯ ಜಿ. ಭಟ್ ಕುರ್ಯ (ಸುಜಿ ಕುರ್ಯ) ಆಯ್ಕೆಯಾಗಿದ್ದಾರೆ ಎಂದು ಸ್ಪಂದನಾ ಸೇವಾ ಸಂಸ್ಥೆಯ ಖಜಾಂಚಿ ರಜನಿ ವಿ. ಪೈ ತಿಳಿಸಿದ್ದಾರೆ.
ಜೂ.15ರಂದು ನಡೆಯುವ ಕಲ್ಯಾಣಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು, ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮರಾಯ ಕಿಣಿ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ
ಸುಬ್ರಹ್ಮಣ್ಯ ಕಾರಂತ,  ಉದ್ಯಾನವನ ವಿನ್ಯಾಸಗಾರ ಲೋಕೇಶ್ ಪೂಜಾರಿ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ಸಹಾಯಕ ಪ್ರಾಧ್ಯಾಪಕಿ ಡಾ.ಮರಿಯಾ ಪಾಯಸ್ ಆಗಮಿಸುವರು.


ಸ್ಪಂದನಾ ಸೇವಾ ಸಂಸ್ಥೆಯ ಖಜಾಂಚಿ ರಜನಿ ವಿ. ಪೈ, ಕಾರ್ಯದರ್ಶಿ ಸಂತೋಷ್ ಕಾಮತ್ ಉಪಸ್ಥಿತರಿರುವರು.


ಇದೇ ಸಂದರ್ಭದಲ್ಲಿ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಆಡಳಿತ ಮಂಡಳಿ ಸದಸ್ಯರನ್ನು ಸ್ಪಂದನಾ ಸೇವಾ ಸಂಸ್ಥೆಯಿಂದ ಗೌರವಿಸಲಾಗುವುದು.