ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆ- ಜೂ.28ಕ್ಕೆ 100ನೇ ಮನೆ ಹಸ್ತಾಂತರ 'ಸೂರು ನೂರರ ಸಡಗರ'

ಲೋಕಬಂಧು ನ್ಯೂಸ್ | ಉಡುಪಿ, ಜೂ.25
ಯಕ್ಷಗಾನ ಕಲೆ ಮತ್ತು ಕಲಾವಿದರಿಗಾಗಿ ಕಾರ್ಯನಿರ್ವಹಿಸುವ ಉಡುಪಿ ಯಕ್ಷಗಾನ ಕಲಾರಂಗ ತನ್ನ 'ವಿದ್ಯಾಪೋಷಕ್' ಯೋಜನೆಯಡಿ ನಿರ್ಮಿಸಿದ 100ನೇ ಮನೆಯ ಹಸ್ತಾಂತರ ಹಾಗೂ ಸೂರು ನೂರರ ಸಡಗರ ಜೂ. 28ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾರಂಗ ಕಳೆದ 26 ವರ್ಷಗಳಿಂದ ಕಲಾವಿದರ ಕಲ್ಯಾಣಕ್ಕಾಗಿ ಹಾಗೂ 22 ವರ್ಷಗಳಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಅದರ ಮಹತ್ವದ ಸಾಧನೆಯಾಗಿ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ 90 ಹಾಗೂ ಬಡ ಕಲಾವಿದರಿಗೆ 10 ಸೇರಿದಂತೆ ಒಟ್ಟು 100 ಮನೆಗಳ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರು.


ಜೂ.28ರ ಬೆಳಿಗ್ಗೆ 9.30ಕ್ಕೆ ಹೆಬ್ರಿ ತಾಲೂಕಿನ ಶಿವಪುರ ಕಲ್ಮುಂಡದಲ್ಲಿ ವಿದ್ಯಾಪೋಷಕ್'ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಅವರ 100ನೇ ಮನೆ 'ಶತಸ್ಮೃತಿ'ಯ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಉದ್ಘಾಟನೆ ನೆರವೇರಿಸಲಿದ್ದು, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದರು.


ಅಪರಾಹ್ನ 2ರಿಂದ 4 ಗಂಟೆ ವರೆಗೆ ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಪ್ರಧಾನ ಸಮಾರಂಭ ನಡೆಯಲಿದೆ. ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಕರ್ಣಾಟಕ ಬ್ಯಾಂಕ್ ಎಂ.ಡಿ ಮತ್ತು ಸಿಇಓ ಎಂ. ರಾಘವೇಂದ್ರ ಭಟ್ 'ಸೂರು ನೂರರ' ಸಂಪುಟ ಅನಾವರಣ ಮಾಡಲಿದ್ದು, ಕೋಟ ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್ ಶುಭ ಹಾರೈಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಐದೂ ಕ್ಷೇತ್ರಗಳ ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಈ ಸಂದರ್ಭದಲ್ಲಿ ಮನೆಗಳ ಪ್ರಾಯೋಜಕರು, ಕಾರ್ಮಿಕರನ್ನು ಸನ್ಮಾನಿಸಲಾಗುವುದು ಹಾಗೂ ಫಲಾನುಭವಿಗಳಿಗೆ ಮಾವಿನ ಸಸಿ ವಿತರಿಸಲಾಗುವುದು ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ವಿವರಿಸಿದರು.


ಫಲಾನುಭವಿಗಳ ದೇಣಿಗೆ
ಸುಮಾರು 7 ಲಕ್ಷ ರೂ. ವೆಚ್ಚದ 100ನೇ ಮನೆಯನ್ನು ಸಂಸ್ಥೆ ಇದುವರೆಗೆ ನಿರ್ಮಿಸಿಕೊಟ್ಟ 99 ಮನೆಗಳ ಫಲಾನುಭವಿಗಳ ಆರ್ಥಿಕ ಸಹಾಯದಿಂದ ನಿರ್ಮಿಸಲಾಗಿದೆ. ಸಂಸ್ಥೆ 2012ರಲ್ಲಿ ನಿರ್ಮಿಸಿದ್ದ ಮೊದಲ ಮನೆಗೆ ಸುಮಾರು 1.5 ಲಕ್ಷ ರೂ. ವೆಚ್ಚವಾಗಿದ್ದು, ಪ್ರಸ್ತುತ 7 ಲಕ್ಷ ರೂ. ವೆಚ್ಚವಾಗಲಿದೆ. ಪ್ರತೀ ಮನೆಗೆ ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯಗಳಾದ ಪೀಠೋಪಕರಣ, ನೀರಿನ ಟ್ಯಾಂಕ್, ಶೌಚಾಲಯ ಇತ್ಯಾದಿಗಳನ್ನೂ ಕಲ್ಪಿಸಿಕೊಡಲಾಗುತ್ತಿದೆ ಎಂದು ಮುರಳಿ ಕಡೆಕಾರ್ ವಿವರಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಉಪಾಧ್ಯಕ್ಷ ಎಸ್.ವಿ. ಭಟ್, ಕೋಶಾಧಿಕಾರಿ ಕೆ.ಸದಾಶಿವ ರಾವ್, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಪದಾಧಿಕಾರಿ ವಿದ್ಯಾ ಪ್ರಸಾದ್ ಇದ್ದರು.