ಐಟಿಡಿಪಿ ಮೂಲಕವೇ ಮನೆ ನಿರ್ಮಿಸಿ

ಲೋಕಬಂಧು ನ್ಯೂಸ್ ಉಡುಪಿ, ಜು.3
ಕೊರಗ ಸಮುದಾಯಕ್ಕೆ ಈ ಹಿಂದೆ ಐಟಿಡಿಪಿ ಇಲಾಖೆ ಮೂಲಕವೇ ವಸತಿ ಸೌಲಭ್ಯ ಅನುಷ್ಠಾನಗೊಳಿಸಲಾಗುತ್ತಿದ್ದು, 2022-23ನೇ ಸಾಲಿನಿಂದ ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕೊರಗ ಸಮುದಾಯದ ಹಲವರಲ್ಲಿ ದಾಖಲೆಗಳಿಲ್ಲ. ಅದರಿಂದಾಗಿ ವಸತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಪುನಃ ಐ.ಟಿ.ಡಿ.ಪಿ ಮೂಲಕವೇ ಮನೆ ನಿರ್ಮಾಣ ಮಾಡಿಕೊಡಲು ವ್ಯವಸ್ಥೆ ಮಾಡಬೇಕು ಎಂದು ಕೊರಗ ಸಮುದಾಯದವರು ಆಗ್ರಹಿಸಿದರು.
ಶುಕ್ರವಾರ ತಾಲೂಕು ಪಂಚಾಯತ್ ಸಭಾಂಗಣಲ್ಲಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಕೊರಗ ಸಮುದಾಯದ ಕುಂದು ಕೊರತೆ ಸಭೆ ನಡೆಯಿತು.


ಕಳೆದ 5 ತಿಂಗಳಿಂದ ಕೊರಗ ಸಮುದಾಯಕ್ಕೆ ಪೌಷ್ಟಿಕ ಆಹಾರ ಕಿಟ್ ವಿತರಣೆಯಾಗಿಲ್ಲ. ಮಳೆಗಾಲದಲ್ಲಿ ಪೌಷ್ಟಿಕ ಆಹಾರ ನೀಡುವುದು ಆತೀ ಅಗತ್ಯವಾಗಿದೆ. ಮುಂದಿನ ಟೆಂಡರ್ ಆಗುವ ವರೆಗೆ ಹಿಂದಿನ ಗುತ್ತಿಗೆದಾರರೇ ಆಹಾರ ಪೂರೈಕೆ ಮಾಡುವಂತೆ ಸರ್ಕಾರ ತಿದ್ದುಪಡಿ ಮಾಡಬೇಕು ಎಂದು ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ ಆಗ್ರಹಿಸಿದರು.


ಆರೋಗ್ಯ ಕಾರ್ಡ್ ವಿತರಣೆಗೆ ಕ್ರಮ
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲಾ ಕೊರಗ ಸಮುದಾಯದ ಕುಟುಂಬದ ವಿವರ ನೀಡಬೇಕು. ವಿದ್ಯಾವಂತ ಕೊರಗ ಸಮುದಾಯದ ಯುವಕರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸಿಗುವಂತಾಗಲು ಸಣ್ಣ ಕೈಗಾರಿಕೆ ಹಾಗೂ ಛೇಂಬರ್ ಆಫ್ ಕಾಮರ್ಸ್ ಪ್ರಮುಖರ ಸಭೆ ಕರೆದು ತರಬೇತಿ ಹಾಗೂ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಮಣಿಪಾಲ ಕೆಎಂಸಿ ವತಿಯಿಂದ ಕೊರಗ ಕುಟುಂಬಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಿ, ಆರೋಗ್ಯ ಕಾರ್ಡ್ ವಿತರಿಸಲಾಗವುದು ಎಂದರು.


ಕೊರಗ ಸಮುದಾಯಕ್ಕೆ ಜಾಗ ಹಸ್ತಾಂತರ
ಕೊರಗ ಸಮುದಾಯ ಮುಖಂಡ ಬೊಗ್ರ ಕೊರಗ ಕೊಕ್ಕರ್ಣೆ ಮಾತನಾಡಿ, ಜಾಗವಿಲ್ಲದವರಿಗೆ ಸೈಟ್ ನೀಡುವ ವಿಚಾರದಲ್ಲಿ ಪ್ರತಿಭಟನೆ ಮಾಡಿದರೂ ಅಧಿಕಾರಿಗಳಿಗೆ ಮಾಹಿತಿಯಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.


ಅದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕೊರಗ ಸಮುದಾಯದ ಫಲಾನುಭವಿ ಕುಟುಂಬಗಳಿಗೆ ತಲಾ 10 ಸೆಂಟ್ಸ್ ಜಾಗ ನೀಡಲು ನಿಗದಿಯಾಗಿದ್ದರೂ ಅದರ ವಿತರಣೆ ತಡವಾಗುತ್ತಿದೆ. ಹಾವಂಜೆ ಗ್ರಾಮದಲ್ಲಿ 1.60 ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದ್ದು, ಅದನ್ನು ಕೂಡಲೇ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕು ಎಂದರು.


ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.