ಸೇಡಿಯಾಪು ಪ್ರಶಸ್ತಿಗೆ ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಜು.12
ಕನ್ನಡ ಭಾಷೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಹಿರಿಯ ಸಾಹಿತಿ, ಕನ್ನಡ ಭಾಷಾ ತಜ್ಞೆ, ಅನುವಾದಕಿ, ಸಂಶೋಧಕಿ ಡಾ.ಟಿ.ಎನ್. ನಾಗರತ್ನ 2026ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ 10 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.


ಶಿವಮೊಗ್ಗದವರಾದ ನಾಗರತ್ನ ಅವರು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿ ಹಾಗೂ ಸಂಶೋಧನ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಸುಮಾರು 35 ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ 2003ರಲ್ಲಿ ನಿವೃತ್ತರಾದರು. ನಂತರ ಕನಕದಾಸ ಅಧ್ಯಯನ ಸಂಶೋಧನಾ ಪೀಠದಲ್ಲಿ ಕನಕದಾಸರ ಕೃತಿಗಳ ಸಂಪಾದನೆ ಮತ್ತು ಅನುವಾದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.


ಕರ್ನಾಟಕ ಸರ್ಕಾರದ ಸಮಗ್ರ ದಾಸ ಸಾಹಿತ್ಯ ಪ್ರಕಟಣೆ ಯೋಜನೆಯಲ್ಲಿಕಾರ್ಯವಾಹಕ ಸಂಪಾದಕಿಯಾಗಿ, 'ಪುರಂದರ ಪೀಠ'ದ ಸಲಹಾ ಸಮಿತಿ ಸದಸ್ಯರಾಗಿ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸದಸ್ಯೆ ಹಾಗೂ ಸಮಗ್ರ ಕನಕ ಸಾಹಿತ್ಯ ಅನುವಾದದ ಬೃಹದ್ಯೋಜನೆಯಲ್ಲಿ ಕನ್ನಡ ಭಾಷಾತಜ್ಞೆಯಾಗಿ ನಿಯುಕ್ತರಾಗಿದ್ದರು.


ದಾಸ ಸಾಹಿತ್ಯಾಧ್ಯಯನ, ಪ್ರಸಾರ, ಬೋಧನೆಗಳಲ್ಲಿ ತೊಡಗಿಸಿಕೊಂಡಿರುವ ಅವರ ಅನೇಕ ಪುಸ್ತಕ, ಲೇಖನಗಳೂ ಪ್ರಕಟವಾಗಿವೆ. 'ಹರಿದಾಸರ ಭಕ್ತಿ ಸ್ವರೂಪ', 'ಶ್ರೀ ಗೋಪಾಲದಾಸರ ಕೃತಿಗಳು', 'ಶ್ರೀ ವಾದಿರಾಜರ ಕೃತಿಗಳು', 'ಶ್ರೀ ಜಗನ್ನಾಥದಾಸರ ಕೃತಿಗಳು', 'ಶ್ರೀ ವ್ಯಾಸರಾಯರ ಕೃತಿಗಳು' 'ಹರಪನಹಳ್ಳಿ ಭೀಮವ್ವನ ಹಾಡುಗಳು,' 'ಶ್ರೀ ರಾಮದಾಸರ ಕೃತಿಗಳು', 'ಶ್ರೀ ಕನಕದಾಸರ ಕೀರ್ತನೆಗಳು'- ಇವು ಇವರ ಕೃತಿಗಳಲ್ಲಿ ಮುಖ್ಯವಾದವು. ಅನೇಕ ವಿಚಾರಸಂಕಿರಣಗಳು, ದಾಸಸಾಹಿತ್ಯ ಗೋಷ್ಠಿಗಳು, ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.


ಕರ್ನಾಟಕ ಸಾಹಿತ್ಯಅಕಾಡೆಮಿ ಬಹುಮಾನ, ಕನ್ನಡ ವಿಶ್ವವಿದ್ಯಾಲಯದ ರಾಷ್ಟ್ರೀಯ ಸಮ್ಮೇಳನದಲ್ಲಿ 'ಗೌರವ ಸಂಮಾನ', 'ಹರಿದಾಸ ಸಾಹಿತ್ಯ ವಿದ್ವನ್ಮಣಿ' ಬಿರುದು- ಅಲ್ಲದೆ 'ವಿಜಯವಿಠಲ' ಪ್ರಶಸ್ತಿ 'ಹೊಯ್ಸಳ' ಪ್ರಶಸ್ತಿ 'ಮಧ್ವ-ಪುರಂದರ' ಪ್ರಶಸ್ತಿ' 2018ರಲ್ಲಿ'ಸಾಹಿತ್ಯ ಸರಸ್ವತಿ', 2009ರಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ 'ಕನಕ ಶ್ರೀ' ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಅವರು ಸಂಪಾದಿಸಿದ 'ಶ್ರೀ ಕನಕದಾಸರ ಕೀರ್ತನೆಗಳು' ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ 2014ನೇ ವರ್ಷದ ಅತ್ಯುತ್ತಮ ಸಂಪಾದಿತ ಕೃತಿ ಎಂದು ಪರಿಗಣಿಸಿ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ.


ಅಖಿಲ ಕರ್ನಾಟಕ 16ನೇ ಹಸ್ತಪ್ರತಿ ಸಮೇಳನದ ಸರ್ವಾಧ್ಯಕ್ಷೆಯಾಗಿಯೂಆಯ್ಕೆಯಾಗಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದಿಂದ 2025ರ ಪ್ರತಿಷ್ಠಿತ 'ಶಂಬಾ ಜೋಷಿ ಸಂಶೋಧನ' ಪ್ರಶಸ್ತಿಗೂ ಭಾಜನರಾಗಿದ್ದಾರೆ.