ಷೇರು ಹೂಡಿಕೆಯಲ್ಲಿ ಆಮಿಷವೊಡ್ಡಿ ವಂಚನೆ: ಮಹಿಳೆಯ ಬಂಧನ

ಲೋಕಬಂಧು ನ್ಯೂಸ್ | ಮುಂಬೈ, ಜು.11
ಷೇರು ಮಾರುಕಟ್ಟೆ ಹೂಡಿಕೆಯ ಮೇಲೆ ಶೇ.10ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಮೂಲತಃ ಉಡುಪಿ ಜಿಲ್ಲೆಯ ಕೊಳಲಗಿರಿ ಕುಕ್ಕಿಕಟ್ಟೆಯ ದೀಪಿಕಾ ಮನೋಜ್ ಶೆಟ್ಟಿ ಎಂಬಾಕೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಚೆಕ್ ಬೌನ್ಸ್ ಹಾಗೂ ಆರ್ಥಿಕ ವಂಚನೆಗೆ ಸಂಬಂಧಿಸಿದ ಇತರ ಪ್ರಕರಣಗಳೂ ದಾಖಲಾಗಿದ್ದು, ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.


ಇಲ್ಲಿನ ಕಾಂದಿವಲಿ ಪಶ್ಚಿಮ ನಿವಾಸಿ, ಸುಮಾರು 60 ವರ್ಷದ ರಜನಿ ದಯಾನಂದ ಶೆಟ್ಟಿ ನೀಡಿದ ದೂರಿನ ಪ್ರಕಾರ ದೀಪಿಕಾ ಮನೋಜ್ ಶೆಟ್ಟಿ ಅವರು ಷೇರು ಮಾರುಕಟ್ಟೆ ಹೂಡಿಕೆಗೆ ಶೇ.10ರಷ್ಟು ಖಚಿತ ಲಾಭ ದೊರೆಯುತ್ತದೆ ಎಂದು ನಂಬಿಸಿ ರಜನಿ ಶೆಟ್ಟಿ ಹಾಗೂ ಅವರ ಸಹೋದರರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.


ಆರೋಪಿಯ ಭರವಸೆಯನ್ನು ನಂಬಿದ ಸಂತ್ರಸ್ತರು ಒಟ್ಟು 10 ಲಕ್ಷ ರೂ. ಹೂಡಿಕೆ ಮಾಡಿದ್ದು, ಬಳಿಕ ಹಣ ಮರಳಿಸದೇ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಕಾಂದಿವಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.