ಲೋಕಬಂಧು ನ್ಯೂಸ್ ಮಂಗಳೂರು
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತವರ ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಡಿಸೆಂಬರ್ 28, 29 ಮತ್ತು 30ರಂದು ಉಡುಪಿಯಲ್ಲಿ ಶ್ರೀಶಂಕರ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಅದರ ಪೂರ್ವಸಿದ್ಧತಾ ಸಭೆ ನಗರದ ರಥಬೀದಿಯ ಬಾಳಂಭಟ್ ಸಭಾಂಗಣದಲ್ಲಿ ಶನಿವಾರ ನಡೆಯಿತು.ಶೃಂಗೇರಿ ಶ್ರೀಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಉಡುಪಿ ಮತ್ತು ಕುಂದಾಪುರಗಳಲ್ಲಿ ಸಭೆ ನಡೆಸಲಾಗಿದ್ದು, ಸಮಸ್ತ ಶಾಂಕರ ತತ್ವಾನುಯಾಯಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಡಿ.28ರಂದು ಸಂಜೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಉಡುಪಿಗೆ ಆಗಮಿಸಲಿದ್ದು, ಬನ್ನಂಜೆ ನಾರಾಯಣ ಗುರು ಮಂದಿರದಿಂದ ಎಂಜಿಎಂ ಕಾಲೇಜು ವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಶ್ರೀಶಂಕರಾಚಾರ್ಯರ ಜೀವನ ಚರಿತ್ರೆ ಸಾರುವ ಟ್ಯಾಬ್ಲೊಗಳ ಸಹಿತ ವಿವಿಧ ದೇವಳಗಳು ಹಾಗೂ ಧಾರ್ಮಿಕ ಕೇಂದ್ರಗಳ ಟ್ಯಾಬ್ಲೊಗಳು, ಭಜನಾ ತಂಡಗಳು, ವಾದ್ಯ ಮೇಳಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ.
ಡಿ.29ರಂದು ಗಣಹೋಮ, ಶಾಂಕರ ಸ್ತೋತ್ರಗಳು, ಲಲಿತಾ ಸಹಸ್ರನಾಮ, ಸ್ತೋತ್ರ ತ್ರಿವೇಣಿ ಸಮರ್ಪಣೆ ಇತ್ಯಾದಿ ನಡೆಯಲಿದೆ. ಜೊತೆಗೆ ಶ್ರೀಶಂಕರಾಚಾರ್ಯರ ಕುರಿತು ಉಪನ್ಯಾಸಗಳು, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯಲಿದ್ದು, ಸುಮಾರು 50 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದವರು ವಿವರಿಸಿದರು.
ಶಾಂಕರ ತತ್ವ ಪ್ರಸಾರ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ ಶಾನುಭಾಗ್, ಡಾ. ಸತ್ಯಕೃಷ್ಣ ಭಟ್ ಮೊದಲಾದವರಿದ್ದರು.ಶೃಂಗೇರಿ ಮಠದ ಮಂಗಳೂರು ಪ್ರಾಂತೀಯ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಸ್ವಾಗತಿಸಿದರು.
ಶಾಂಕರ ತತ್ವಾನುಯಾಯಿ ವಿವಿಧ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.