ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

ಲೋಕಬಂಧು ನ್ಯೂಸ್ l ಮಣಿಪಾಲ
ವಿಶ್ವ ಹೃದಯ ದಿನ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಒಪಿಡಿ ಲಾಂಜ್‌ನಲ್ಲಿ ಆರೋಗ್ಯ ಜಾಗೃತಿ ಶಿಲ್ಪವನ್ನು ಮಂಗಳವಾರ‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಂಗಳವಾರ ಅನಾವರಣಗೊಳಿಸಿದರು.ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಹೃದ್ರೋಗ ವಿಭಾಗ ಮತ್ತು ಕಾರ್ಡಿಯೋ ವ್ಯಾಸ್ಕುಲರ್ ಆ್ಯಂಡ್ ಥೊರಾಸಿಕ್ ಸರ್ಜರಿ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಹೃದ್ರೋಗ, ಭಾರತದಲ್ಲಿ ಸಾವಿಗೆ ಪ್ರಮುಖ ಕಾರಣಗಳಲ್ಲೊಂದಾಗಿದ್ದು ಆರೋಗ್ಯಕರ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆಯಿಂದ ದೂರವಿರುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆಯಿಂದ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಡಾ.ಅವಿನಾಶ್ ಶೆಟ್ಟಿ ಹೇಳಿದರು.


ಎದೆ ಅಸ್ವಸ್ಥತೆ, ಉಸಿರಾಟದ ತೊಂದರೆ ಹಾಗೂ ಅಸಹಜ ಆಯಾಸದಂಥ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವಂತೆ ಅವರು ಸಲಹೆ ನೀಡಿದರು.


'ಡೋಂಟ್ ಮಿಸ್ ಎ ಬೀಟ್’ (ಹೃದಯದ ಒಂದು ಬಡಿತವನ್ನೂ ನಿರ್ಲಕ್ಷಿಸಬೇಡಿ) ಎಂಬುದು ಈ ವರ್ಷದ ವಿಶ್ವ ಹೃದಯ ದಿನದ ಸಂದೇಶವಾಗಿದ್ದು, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಮಾರ್ಗದರ್ಶನದಲ್ಲಿ ಶ್ರೀನಾಥ್ ಮಣಿಪಾಲ್ ಅವರು ರೂಪಿಸಿರುವ 3ಡಿ ಕಲಾಕೃತಿ ಈ ಸಂದೇಶವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತಿದೆ. ಶಿಲ್ಪವನ್ನು ಆಸ್ಪತ್ರೆಯ ಒಪಿಡಿ ಲಾಂಜ್‌ನಲ್ಲಿ ಇರಿಸಿರುವುದರಿಂದ ರೋಗಿಗಳು, ಆರೈಕೆದಾರರು ಹಾಗೂ ಸಂದರ್ಶಕರಿಗೆ ಹೃದಯದ ಆರೈಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.


ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಪರಮಶಿವಮ್, ಕಾರ್ಡಿಯೋ ವ್ಯಾಸ್ಕುಲರ್ ಆ್ಯಂಡ್ ಥೊರಾಸಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್ ಸೇವಗೂರ್, ಪ್ರಾಧ್ಯಾಪಕ ಡಾ. ಟಾಮ್ ದೇವಾಸಿಯಾ ಸೇರಿದಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.