ವಾಲ್ಮೀಕಿ ಆದರ್ಶಗಳ ಪಾಲನೆಯಿಂದ ವ್ಯಕ್ತಿತ್ವದ ಬದಲಾವಣೆ ಸಾಧ್ಯ
Sunday, October 29, 2023
ಉಡುಪಿ, ಅ.28 (ಲೋಕಬಂಧು ವಾರ್ತೆ): ವಾಲ್ಮೀಕಿಯ ಆದರ್ಶ, ಚಿಂತನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪಾಲಿಸಿದಾಗ ವ್ಯಕ್ತಿತ್ವದ ಬದಲಾವಣೆ ಸಾಧ್ಯ ಎಂದು ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ಮಣಿಪಾಲ ರಜಾತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಂಯುಕ್ತಾಶ್ರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಬೆೇಟೆಗಾರನ ಕುಟುಂಬದಲ್ಲಿ ಜನಿಸಿದ್ದರೂ ನಂತರದಲ್ಲಿ ವ್ಯಕ್ತಿತ್ವದ ಬದಲಾವಣೆಯಿಂದಾಗಿ ಹಲವಾರು ಆದರ್ಶ ಪುರುಷರಲ್ಲಿ ವಾಲ್ಮೀಕಿ ಒಬ್ಬರಾಗಿದ್ದಾರೆ ಎಂದರು.
ಪರಿಶಿಷ್ಟ ಪಂಗಡದ ವರ್ಗದವರಿಗೆ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದ ಶಾಸಕ ಯಶಪಾಲ್, ಪರಿಶಿಷ್ಟ ಪಂಗಡದವರಿಗೆ ಅನುಷ್ಠಾನಗೊಳಿಸಲಾದ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಬೇಡನಾಗಿದ್ದ ವಾಲ್ಮೀಕಿ, ಮಹರ್ಷಿಯಾಗಿ ಬದಲಾವಣೆಯಾಗಿದ್ದು ಅಂಥ ವ್ಯಕ್ತಿತ್ವದ ಬದಲಾವಣೆಯನ್ನು ವಾಲ್ಮೀಕಿಯವರಲ್ಲಿ ಕಾಣಬಹುದಾಗಿದೆ.
ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅಸಾಧಾರಣ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.
ಕ್ರೌಂಚ ಪಕ್ಷಿಗಳ ಚಿಕ್ಕ ಘಟನೆ ಬೇಡನಾಗಿದ್ದ ಅವರ ಬದುಕನ್ನೇ ಬದಲಾಯಿಸಿತು. ಆ ಮಾನವೀಯ ಸ್ಪರ್ಶವನ್ನು ಅವರ ಜೀವನದಲ್ಲಿ ಅಳವಡಿಸಿಕೊಂಡು, ಆ ಮೂಲಕ ಇಡೀ ಜಗತ್ತಿಗೆ ರಾಮಾಯಣ ಕೃತಿಯನ್ನು ಕೊಡುಗೆಯಾಗಿ ನೀಡಿದರು.
ಅವರ ರಾಮಾಯಣ ಕೃತಿ ವಿವಿಧ ರೂಪಗಳಲ್ಲಿ, ಸಾವಿರಾರು ವಿಭಿನ್ನ ರಾಮಾಯಣಗಳ ರೂಪಗಳಲ್ಲಿ, ಜಾನಪದಗಳಲ್ಲಿ ನಾವು ಇಂದಿಗೂ ಕಾಣಬಹುದು ಎಂದರು.
ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ. ಆಧುನಿಕ ಯುಗದಲ್ಲಿ ದ್ವೇಷ ಭಾವನೆ ಬಿಟ್ಟು, ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಜೀವನ ನಡೆಸಬೇಕು ಎಂದರು.
ಮಹರ್ಷಿ ವಾಲ್ಮೀಕಿ ಕುರಿತು ಲೇಖಕಿ ಡಾ| ರೇಖಾ ವಿ ಬನ್ನಾಡಿ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಅಕ್ಷರ ಜ್ಞಾನ ಇಲ್ಲದ ಸಂದರ್ಭದಲ್ಲಿಯೂ ಅಕ್ಷರ ಕಲಿತು ಮಹಾನ್ ಗ್ರಂಥವಾದ ರಾಮಾಯಣವನ್ನು ರಚಿಸಿದರು.
ಅನೇಕ ಮಾನವಿಯ ಮೌಲ್ಯಗಳು, ಕೌಟುಂಬಿಕ ಮೌಲ್ಯಗಳು ಪಿತೃ ವಾಕ್ಯ ಪರಿಪಾಲನೆ, ಅಳಿಲು ಸೇವೆ, ಕರ್ತವ್ಯ ನಿಷ್ಠೆ ಮತ್ತಿತರ ಮೌಲ್ಯಗಳ ಬಗ್ಗೆ ರಾಮಾಯಣದಲ್ಲಿ ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ವಿವಿಧ ಸಾಧಕರನ್ನು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ. ಎಸ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಮೊದಲಾದವರಿದ್ದರು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ದೂದ್ ಪೀರ್ ಸ್ವಾಗತಿಸಿದರು. ಶ್ರೀದೇವಿ ನಿರೂಪಿಸಿ, ವಿಶ್ವನಾಥ ಶೆಟ್ಟಿ ವಂದಿಸಿದರು.