ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಜಿಲ್ಲಾಡಳಿತ ಸಹಕಾರ ನೀಡಲಿ
Sunday, October 29, 2023
ಉಡುಪಿ, ಅ.28 (ಲೋಕಬಂಧು ವಾರ್ತೆ): ಜಿಲ್ಲೆಯಲ್ಲಿ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಜನಜೀವನದ ಸಂಸ್ಕೃತಿಯ ಭಾಗವಾಗಿ ಗುರುತಿಸಿಕೊಂಡಿರುವ ಕಂಬಳ, ಕೋಳಿ ಅಂಕ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಮೊದಲಾದ ಕಾರ್ಯಕ್ರಮಗಳ ಆಯೋಜನೆ ಸಂದರ್ಭದಲ್ಲಿ ಜಿಲ್ಲಾಡಳಿತ ಕಠಿಣ ನಿಯಮಾವಳಿ ರೂಪಿಸಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸಹಕರಿಸುವಂತೆ ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.ದೈವಾರಾಧನೆಯ ಚೌಕಟ್ಟಿನಲ್ಲಿ ದೈವಗಳಿಗೆ ರಕ್ತಾಹಾರದ ಕಲ್ಪನೆಯಲ್ಲಿ ಹಲವು ದೈವಸ್ಥಾನ, ಮಂದಿರಗಳಲ್ಲಿ ಹಲವಾರು ದಶಕಗಳಿಂದ ಕೋಳಿ ಅಂಕ ಆಯೋಜಿಸುವ ಪದ್ಧತಿ ಇದೆ ಹಾಗೂ ಜಿಲ್ಲೆಯಾದ್ಯಂತ ಯಕ್ಷಗಾನ, ನೇಮೋತ್ಸವ ಕಾರ್ಯಕ್ರಮಗಳು ಈ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿದ್ದು, ಆ ಬಗ್ಗೆ ಜಿಲ್ಲಾಡಳಿತ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ, ಧಾರ್ಮಿಕ ನಂಬಿಕೆಗಳಿಗೆ ಪೂರಕವಾಗಿ ಅವಕಾಶ ನೀಡಿ ಸಹಕರಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಶೀಘ್ರದಲ್ಲಿಯೇ ಜಿಲ್ಲೆಯ ಎಲ್ಲಾ ಶಾಸಕರು ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ನಡೆಯದ ಜಿಲ್ಲಾ ಪ್ರಗತಿ ಪರಿಶೀಲನ ಸಭೆ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 5 ತಿಂಗಳು ಕಳೆದರೂ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನ (ಕೆಡಿಪಿ) ಸಭೆ ನಡೆಯದೇ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ.
ವಿವಿಧ ಇಲಾಖೆಗಳ ಹಲವಾರು ಯೋಜನೆಗಳ ಅನುದಾನ ಬಿಡುಗಡೆಯಾಗದೇ ಅತಂತ್ರವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು ಎಂದು ಶಾಸಕ ಯಶಪಾಲ್ ಆಗ್ರಹಿಸಿದ್ದಾರೆ.