ಕೇರಳ: ಚರ್ಚ್ ಬಳಿ ಸರಣಿ ಸ್ಪೋಟ
Sunday, October 29, 2023
ಕೊಚ್ಚಿ, ಅ.29 (ಲೋಕಬಂಧು ವಾರ್ತೆ): ಕೇರಳದ ಎರ್ನಾಕುಲಂ ಬಳಿಯ ಕಲಮಸ್ಸೇರಿ ಎಂಬಲ್ಲಿನ ಚರ್ಚ್ ಬಳಿಯ ಕನ್ವೆನ್ಷನ್ ಸೆಂಟರ್ ಒಂದರಲ್ಲಿ ಸ್ಫೋಟವಾಗಿದ್ದು ಒಬ್ಬ ವ್ಯಕ್ತಿ ಮೃತಪಟ್ಟು 36ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಘಟನೆಯಲ್ಲಿ 3-4 ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ಕಲಮಸ್ಸೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದರ ಹಿಂದೆ ಒಂದರಂತೆ ಎರಡು ದೊಡ್ಡ ಸ್ಪೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಸ್ಪೋಟಕ್ಕೆ ಕಾರಣ ತಿಳಿದು ಬಂದಿಲ್ಲ, ಪೊಲೀಸರು, ಅಗ್ನಿಶಾಮಕ ದಳ ಹಾಗೂ ಆರೋಗ್ಯ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಸಚಿವ ಪಿ ರಾಜೀವ್ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು ಕೇಂದ್ರದಲ್ಲಿ 2 ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ ಸಮುದಾಯದ ಜನ ಇದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ವ್ಯಕ್ತಿಯೋರ್ವ ಶರಣಾಗಿದ್ದು ಕೃತ್ಯ ಒಪ್ಪಿಕೊಂಡಿದ್ದಾನೆ.
ಸ್ಥಳಕ್ಕೆ ಎನ್.ಐಎ ತಂಡ ದೌಡಾಯಿಸಿದ್ದು ತನಿಖೆ ನಡೆಸುತ್ತಿದೆ.