Deepavali: ಬೆಳಕಿನ ಹಬ್ಬ ದೀಪಾವಳಿ
Saturday, November 11, 2023
ತಮಸೋಮಾ ಜ್ಯೋತಿರ್ಗಮಯ- ಕತ್ತಲಿನಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ. ಇದು ದೀಪಾವಳಿ ನೀಡುವ ಸಂದೇಶ.
ಜಂಜಡದ ಬದುಕಿಗೆ ಮುದ ನೀಡುವ ದೀಪಾವಳಿ ಹಬ್ಬದಾಚರಣೆ ಬಗ್ಗೆ ಮೂಡುಬಿದಿರೆ ನಿತ್ಯಾನಂದ ಕಾಮತ್ ಹಂಚಿಕೊಂಡಿದ್ದಾರೆ.
ಆಶ್ವಯುಜ ಕೃಷ್ಣ ತ್ರಯೋದಶಿ (ಧನ ತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕ ಚತುರ್ದಶಿ), ಅಮಾವಾಸ್ಯೆ (ಲಕ್ಷ್ಮೀ ಪೂಜೆ) ಮತ್ತು ಕಾರ್ತೀಕ ಶುಕ್ಲ ಪ್ರತಿಪದೆ (ಬಲಿ ಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ.
ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಗಣನೆಗೆ ತೆಗೆದುಕೊಳ್ಳದೇ ದೀಪಾವಳಿ ಮೂರು ದಿನಗಳದ್ದಾಗಿದೆ ಎಂದು ನಂಬುತ್ತಾರೆ.
ಗೋವತ್ಸ ದ್ವಾದಶಿ ಮತ್ತು ಸಹೋದರ ಬಿದಿಗೆ ಈ ದಿನಗಳು ದೀಪಾವಳಿಗೆ ಹೊಂದಿಕೊಂಡೇ ಬರುವುದರಿಂದ ಅವುಗಳನ್ನು ದೀಪಾವಳಿಯಲ್ಲಿಯೇ ಸಮಾವೇಶಗೊಳಿಸಲಾಗುತ್ತದೆ. ಆದರೆ, ಈ ಹಬ್ಬಗಳು ಬೇರೆ ಬೇರೆಯಾಗಿವೆ.
ದುಷ್ಟ ಪ್ರವೃತ್ತಿಯ ವಿಮುಕ್ತಿ
ಶ್ರೀಕೃಷ್ಣನು ಆಸುರೀ ಪ್ರವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗ ವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟ ಪ್ರವೃತ್ತಿಗಳಿಂದ ಮುಕ್ತಗೊಳಿಸಿದ ಮತ್ತು ಪ್ರಭುವಿನ ವಿಚಾರ (ದೈವೀ ವಿಚಾರ)ಗಳನ್ನು ನೀಡಿ ಸುಖಿಯಾಗಿಸಿದ. ಅದುವೇ ಈ ದೀಪಾವಳಿ.
ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂಬುದಾಗಿ ದೀಪಾವಳಿಯನ್ನು ಆಚರಿಸುತ್ತಿದ್ದೇವೆ.
ಇಂದು ಅದರ ಗೂಢಾರ್ಥ ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನ ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರೀ, ಆಸುರೀ ಪ್ರವೃತ್ತಿಯಿರುವ ಜನರ ಪ್ರಾಬಲ್ಯ ಕಡಿಮೆಯಾಗಿ ಸಜ್ಜನ ಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುತ್ತದೆ.
ಅಯೋಧ್ಯೆಯಿಂದ ಆರಂಭ
ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಪ್ರಭು ಶ್ರೀರಾಮಚಂದ್ರ ಮರಳಿ ಅಯೋಧ್ಯೆಗೆ ಬಂದ. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು ಎನ್ನಲಾಗುತ್ತದೆ.
ಹಚ್ಚಬೇಕು ದೀಪ
ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಅದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹ ಬರುತ್ತದೆ ಮತ್ತು ಆನಂದವಾಗುತ್ತದೆ.
ವಿದ್ಯುದ್ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿ ಇರುತ್ತದೆ.
ದೀಪ ಪದದ ನಿಜವಾದ ಅರ್ಥ ಎಣ್ಣೆ ಮತ್ತು ಬತ್ತಿಯ ಜ್ಯೋತಿ. 'ತಮಸೋ ಮಾ ಜ್ಯೋತಿರ್ಗಮಯ' ಅಂದರೆ ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು ಎಂಬುದಾಗಿದೆ.
ಲಕ್ಷ್ಮೀ ನಿವಾಸ
ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀ ವಾಸ ಮತ್ತು ಜ್ಞಾನದ ಪ್ರಕಾಶ ಇರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಅದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.
ಸಾತ್ವಿಕತೆಗಾಗಿ ಅಭ್ಯಂಗ
ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆಯಲ್ಲಿ ಶೇ.6ರಷ್ಟು ಹೆಚ್ಚು ಸಾತ್ವಿಕತೆ ಸಿಗುತ್ತದೆ.
ಸುಗಂಧಯುಕ್ತ ಎಣ್ಣೆ ಮತ್ತು ಉಟಣೆಯನ್ನು ಹಚ್ಚಿಕೊಂಡು ಶರೀರಕ್ಕೆ ಮಾಲೀಶ ಮಾಡಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಸಾತ್ವಿಕತೆ ಮತ್ತು ತೇಜ ಹೆಚ್ಚಾಗುತ್ತದೆ.
ಉಟಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕಫ ಮತ್ತು ಕೊಬ್ಬು ಕಡಿಮೆಯಾಗುತ್ತದೆ.
ಸ್ನಾನದಿಂದ ರಜ- ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣ ಹೆಚ್ಚಾಗುತ್ತದೆ. ಅದರ ಪರಿಣಾಮ ನಿತ್ಯದ ಸ್ನಾನದಿಂದ ಮೂರು ಗಂಟೆ ಉಳಿದರೆ ಅಭ್ಯಂಗ ಸ್ನಾನದ ಪ್ರಭಾವ ನಾಲ್ಕರಿಂದ ಐದು ಗಂಟೆ ಉಳಿಯುತ್ತದೆ.
ಬಿಸಿ ನೀರು ಮಂಗಲಕಾರಕ ಮತ್ತು ಶರೀರಕ್ಕೆ ಸುಖದಾಯಕವಾಗಿರುತ್ತದೆ. ಆದುದರಿಂದ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆ ಉಳಿಯುತ್ತದೆ. ಆದುದರಿಂದ ಸ್ನಾನಕ್ಕೆ ಮೊದಲು ಎಣ್ಣೆ ಹಚ್ಚುವುದು ಅವಶ್ಯ.
ಬೇಡ ಪಟಾಕಿ
ದೀಪಾವಳಿ ಮನೋರಂಜನೆಯ ಹಬ್ಬವಾಗಿರದೇ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹಬ್ಬ.
ಆದರೆ, ದೀಪಾವಳಿಯ ಆನಂದ ಪಡೆಯಲು ಸಣ್ಣವರು ದೊಡ್ಡವರು ಎಲ್ಲರೂ ಪಟಾಕಿ ಸಿಡಿಸುತ್ತಾರೆ. ಆನಂದ ಪಡೆಯಲು ಪಟಾಕಿಗಳ ಆವಶ್ಯಕತೆ ಇಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನುಂಟುಮಾಡುವ ಪಟಾಕಿಗಳು ನಮಗೆ ಹಾಗೆಯೇ ಇತರರಿಗೂ ತ್ರಾಸದಾಯಕ. ಇತರರಿಗೆ ತೊಂದರೆ ನೀಡಿ ಉತ್ಸವಗಳನ್ನು ಆಚರಿಸುವುದನ್ನು ಹಿಂದೂ ಧರ್ಮದಲ್ಲಿ ನಿಂದ್ಯ ಎನ್ನಲಾಗಿದೆ.
ದೀಪಾವಳಿಯ ದಿನಗಳಲ್ಲಿ ಯೋಗ್ಯರೀತಿಯಲ್ಲಿ ಧರ್ಮಾಚರಣೆ ಮಾಡಿಯೇ ನಿಜವಾದ ಆನಂದ ಅನುಭವಿಸಲು ಸಾಧ್ಯ.
ಅದಕ್ಕಾಗಿ ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಸಿಡಿಸದೇ ಶಾಸ್ತ್ರದಲ್ಲಿ ಹೇಳಿದಂತೆ ಆಚರಿಸುವುದು ಯುಕ್ತ.
-✍️ನಿತ್ಯಾನಂದ ಕಾಮತ್, ಮೂಡುಬಿದಿರೆ