-->
Raghupathi Bhat: ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಆತ್ಮಹತ್ಯೆ ಪ್ರಕರಣ: ಆರೋಪಿ ಅತುಲ್ ರಾವ್ ಗೆ ಜೈಲು

Raghupathi Bhat: ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಆತ್ಮಹತ್ಯೆ ಪ್ರಕರಣ: ಆರೋಪಿ ಅತುಲ್ ರಾವ್ ಗೆ ಜೈಲು

ಉಡುಪಿ, ನ.10 (ಲೋಕಬಂಧು ವಾರ್ತೆ): 2008ರ ಜೂನ್ 10ರಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿರುವ ಪ್ರಕರಣದಲ್ಲಿ ಆರೋಪಿ ಆತುಲ್ ರಾವ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.ಅಂದಿನ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ, ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಬಾಲ್ಯ ಸ್ನೇಹಿತ, ಕರಂಬಳ್ಳಿ ನಿವಾಸಿ ಅತುಲ್ ರಾವ್ ಎಂಬಾತ ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದುಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಬಿಟ್ಟು, ಅದರೊಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದ ಎಂದು ದೂರಲಾಗಿತ್ತು.

ಕಾರನ್ನು ಅಲ್ಲೇ ಬಿಟ್ಟು ಅತುಲ್ ತನ್ನ ಕಾರಿನಲ್ಲಿ ಪದ್ಮಪ್ರಿಯ ಅವರನ್ನು ಕುಮಟಾದ ವರೆಗೆ ಕರೆದು ಹೋಗಿದ್ದ.

ಕುಮಟಾಕ್ಕೆ ಬೆಂಗಳೂರಿನ ಚಾಲಕನೋರ್ವನನ್ನು ಕರೆಸಿ, ತನ್ನ ಕಾರನ್ನು ಬೆಂಗಳೂರಿಗೆ ಕಳಿಸಿಕೊಟ್ಟಿದ್ದ.

ಇತ್ತ ಪದ್ಮಪ್ರಿಯ ಅವರನ್ನು ಅತುಲ್ ರಾವ್ ಬಾಡಿಗೆ ಕಾರಿನಲ್ಲಿ ಕುಮಟಾದಿಂದ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದ.

ಅತುಲ್ ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ಗೆ ಪದ್ಮಪ್ರಿಯ ಫೋಟೋ ಅಂಟಿಸಿ, ಮೀರಾ ಹೆಸರಿನಲ್ಲಿ ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದ.

ಆ ಘಟನೆಗೂ ಮುನ್ನ ದೆಹಲಿಗೆ ಹೋಗಿದ್ದ ಆತುಲ್ ರಾವ್, ಅಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ.

ಅದಕ್ಕೆ ಬೆಂಗಳೂರಿನ ನಕಲಿ ವಿಳಾಸ ನೀಡಿ, ಬಾಡಿಗೆ ಕರಾರು ಪತ್ರ ಮಾಡಿಸಿಕೊಂಡಿದ್ದ. ಅದು ಅಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿತ್ತು.

ಆ ಬಾಡಿಗೆ ಕರಾರು ಪತ್ರದಿಂದಲೇ ಆತುಲ್ ರಾವ್ ಅಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆದಿದ್ದ.

ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ್ದ ಅತುಲ್ ರಾವ್ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರೂ ಅಲ್ಲಿ ತನ್ನ ವಿದ್ಯಾರ್ಹತೆಯನ್ನು ಬಿಇ ಮತ್ತು ಇಂಟೆಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂಬುದಾಗಿ ಉಲ್ಲೇಖ ಮಾಡಿದ್ದ ಎಂದು ದೂರಲಾಗಿದೆ.

ದೆಹಲಿಯಲ್ಲಿ ಬಾಡಿಗೆ ರೂಮಿಗೆ ಓಡಾಟ ನಡೆಸುತ್ತಿದ್ದಾಗ ತಂಗಿದ್ದ ಲಾಡ್ಜ್‌‌ಗೂ ಬೆಂಗಳೂರಿನ ನಕಲಿ ವಿಳಾಸ ನೀಡುತ್ತಿದ್ದ.

ಜೂ.10ರಂದು ದೆಹಲಿಗೆ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್ ವೊಂದರಲ್ಲಿ ರೂಮ್ ಮಾಡಿದ್ದ.‌ ಅಲ್ಲಿಂದ ಜೂ.12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜೊತೆ ಪದ್ಮಪ್ರಿಯ ಅವರನ್ನು ಹುಡುಕುವ ನಾಟಕ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಓಡಿ ಅಧಿಕಾರಿಗಳು ತನಿಖೆ ನಡೆಸಿದ್ದರು.

ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ. 22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಅದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಟಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರುಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು.

ಅದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಐಪಿಸಿ 468 ಕಾಯಿದೆಯಡಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ ಆಳ್ವ ವಾದ 
ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article