-->
Ayurveda ಆಯುರ್ವೇದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ

Ayurveda ಆಯುರ್ವೇದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ

ಉಡುಪಿ, ನ.10 (ಲೋಕಬಂಧು ವಾರ್ತೆ): ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಗಳ ವಿರುದ್ಧ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಚಿಕಿತ್ಸೆ ಹಾಗೂ ಔಷಧಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.
ಶುಕ್ರವಾರ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಸಹಯೋಗದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದ ಆಧುನಿಕ ಕಾಲದಲ್ಲಿ ಪ್ರಸ್ತುತವಾಗಿರುವ ಔಷಧ. ಇದು ಅತ್ಯಂತ ಪುರಾತನ ಆರೋಗ್ಯ ವ್ಯವಸ್ಥೆಯಾಗಿದ್ದು, ರೋಗಗಳ ತಡೆಗಟ್ಟುವಿಕೆ ಹಾಗೂ ಆರೋಗ್ಯ ವೃದ್ಧಿ ಆಯುರ್ವೇದದ ಮುಖ್ಯ ಗುರಿ ಎಂದರು.

ಧನ್ವಂತರಿ ದೈವಿಕ ವೈದ್ಯ. ರೋಗ ರುಜಿನಗಳಿಂದ ಮುಕ್ತಿ ಹೊಂದಲು ಆಯುರ್ವೇದದ ಜ್ಞಾನದ ಅತ್ಯಂತ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯನ್ನು ಮನುಕುಲಕ್ಕೆ ನೀಡಿದ್ದಾರೆ ಎಂದರು.

ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು 2016ರಿಂದ ಆಯುಷ್ ಇಲಾಖೆ ಆಚರಿಸುತ್ತಾ ಬಂದಿದೆ. ಆಯುರ್ವೇದ ಆಹಾರ, ಯೋಗ, ಗಿಡಮೂಲಿಕೆ ಚಿಕಿತ್ಸೆ ಇತ್ಯಾದಿ ಒಳಗೊಂಡಂತೆ ಸಾಂಪ್ರದಾಯಕ ಆರೋಗ್ಯ ವ್ಯವಸ್ಥೆ ಹೊಂದಿದೆ.

ಸರಕಾರ ಆಯುರ್ವೇದಿಕ್ ಆಸ್ಪತ್ರೆಗಳ ಮೂಲಕ ಆರೋಗ್ಯ ಸೇವೆ ಒದಗಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಉತ್ತಮ ಚಿಕಿತ್ಸೆ ನೀಡಲು ಆಯುಷ್ ವೈದ್ಯಾಧಿಕಾರಿಗಳು ಮುಂದಾಗಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ದೇವರಾದ ಧನ್ವಂತರಿ ಜಯಂತಿಯನ್ನು ಅಶ್ವಯುಜ ಮಾಸದ ಅಮಾವಾಸ್ಯೆಯ ಹಿಂದಿನ ದಿನದಂದು ಆಚರಿಸಲಾಗುತ್ತಿದೆ.

ಈ ಬಾರಿ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಪ್ರತಿದಿನ ಪ್ರತಿಯೊಬ್ಬರಿಗೂ ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ ಎಂದರು.

ಆಯುರ್ವೇದದಿಂದ ಪ್ರತಿಯೊಬ್ಬರೂ ಪಡೆದುಕೊಳ್ಳಬಹುದಾದ ಆರೋಗ್ಯ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲು ಜಯಂತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೂ ಆಚರಿಸಲಾಗುತ್ತಿದೆ ಎಂದರು.

ತಜ್ಞ ವೈದ್ಯ ಡಾ. ಶ್ರೀಧರ ಬಾಯರಿ ಆಯುರ್ವೇದ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.

ಆಯುಷ್ ಫೆಡರೇಷನ್ ಜಿಲ್ಲಾಧ್ಯಕ್ಷ ಡಾ. ನಾರಾಯಣ್ ಅಂಚನ್ ಪಡುಬಿದ್ರಿ, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ನಾಗರಾಜ್ ಮೊದಲಾದವರಿದ್ದರು.


ಇದೇ ಸಂದರ್ಭದಲ್ಲಿ ಉತ್ತಮವಾಗಿ ಧನ್ವಂತರಿ ಆರೋಗ್ಯ ವನ ನಿರ್ಮಿಸಿದ ವಿವಿಧ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಡಾ. ವೀಣಾ ಕಾರಂತ ನಿರೂಪಿಸಿ, ಶ್ಯಾಮರಾವ್ ವಂದಿಸಿದರು.

Ads on article

Advertise in articles 1

advertising articles 2

Advertise under the article