
Udupi: ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ
Sunday, November 12, 2023
ಉಡುಪಿ, ನ.12 (ಲೋಕಬಂಧು ವಾರ್ತೆ): ಜಿಲ್ಲೆಯನ್ನೇ ಬೆಚ್ಚಿಬೀಳಿಸುವ ಅಮಾನವೀಯ ಘಟನೆಯೊಂದು ನಗರದ ಹೊರವಲಯದ ಹಂಪನಕಟ್ಟೆ ಸಮೀಪದ ನೇಜಾರಿನಲ್ಲಿ ಭಾನುವಾರ ಸಂಭವಿಸಿದೆ.
ಚಾಕುವಿನಿಂದ ಇರಿದು ತಾಯಿ ಮತ್ತು ಮೂವರು ಮಕ್ಕಳನ್ನು ಕೊಲೆಗೈದು ದುಷ್ಕರ್ಮಿ ಪರಾರಿಯಾಗಿದ್ದಾನೆ.
ಹತ್ಯೆಗೀಡಾದವರನ್ನು ಹಸೀನಾ (48) ಹಾಗೂ ಮಕ್ಕಳಾದ ಅಫ್ಸಾನ್ (23), ಅಯ್ನಾಝ್ (20) ಮತ್ತು ಅಸೀಮ್ (14) ಎಂದು ಗುರುತಿಸಲಾಗಿದ್ದು, ಮೃತ ಹಸೀನಾ ಅತ್ತೆಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಸೀನಾ ಪತಿ ವಿದೇಶದಲ್ಲಿದ್ದಾರೆ.
ಕೊಲೆಗೆ ಕಾರಣ ಏನೆಂಬುದು ತನಿಖೆಯಿಂದ ತಿಳಿಯಬೇಕಿದೆ. ಮನೆಯಲ್ಲಿ ಯಾವ ವಸ್ತುಗಳ ಕಳವು ನಡೆದಿಲ್ಲ.
ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.
ಮಾಸ್ಕ್ ಧರಿಸಿದ್ದ ಹಂತಕ
ಇಂದು ಬೆಳಿಗ್ಗೆ 8.30ರ ವೇಳೆಯಲ್ಲಿ ಘಟನೆ ನಡೆದಿದ್ದು, ಮಾಸ್ಕ್ ಧರಿಸಿಕೊಂಡು ಬಂದ ವ್ಯಕ್ತಿ ಏಕಾಏಕಿ ಮನೆಗೆ ನುಗ್ಗಿ ಮೊದಲು ಮಹಿಳೆ ಹಾಗೂ ಮಕ್ಕಳಾದ ಅಯ್ನಾಜ್ ಮತ್ತು ಅಫ್ಸಾನ್ ಗೆ ಇರಿದಿದ್ದು, ಬೊಬ್ಬೆ ಕೇಳಿ ಹೊರಗೆ ಆಟವಾಡುತ್ತಿದ್ದ ಆಸೀಮ್ ಮನೆಯೊಳಗೆ ಬರುತ್ತಿದ್ದಂತೆ ಆತನನ್ನೂ ಇರಿದು ಕೊಲ್ಲಲಾಗಿದೆ.
ಘಟನಾ ಸ್ಥಳಕ್ಕೆ ಎಸ್.ಪಿ ಅರುಣ್, ಡಿವೈಎಸ್ಪಿ ದಿನಕರ್ ಹಾಗೂ ಮಲ್ಪೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದ್ವೇಷ ಕಾರಣ?
ಘಟನೆಗೆ ವೈಯಕ್ತಿಕ ದ್ವೇಷ ಕಾರಣ ಎನ್ನಲಾಗಿದ್ದು, ಕೊಲೆಯಾದ ಅಫ್ನಾನ್, ಬೆಂಗಳೂರಿನ ಏರ್ ಇಂಡಿಯಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಕಳೆದ ರಾತ್ರಿ ಉಡುಪಿಗೆ ಬಂದಿದ್ದಳು.
ಆಕೆಯೊಂದಿಗೆ ಹೊಂದಿರಬಹುದಾದ ದ್ವೇಷ ಘಟನೆ ಕಾರಣ ಎನ್ನಲಾಗಿದ್ದು, ಸಾಕ್ಷ್ಯ ನಾಶ ಹಿನ್ನೆಲೆಯಲ್ಲಿ ಉಳಿದ ಮೂವರನ್ನೂ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಅಯ್ನಾಝ್ ಲಾಜಿಸ್ಟಿಕ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಆಸಿಂ 8ನೇ ತರಗತಿಯ ವಿದ್ಯಾರ್ಥಿ. ತಾಯಿ ಹಸೀನಾ ಗೃಹಿಣಿಯಾಗಿದ್ದಾರೆ.
ಆಟೋದಲ್ಲಿ ಬಂದ ಹಂತಕ!
ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ನಡೆಸಿದ ಹಂತಕನನ್ನು ತಾನೇ ಕರೆದುಕೊಂಡು ಅವರ ಮನೆಗೆ ಬಿಟ್ಟಿದ್ದಾಗಿ ಸಂತೆಕಟ್ಟೆ ಆಟೋ ಚಾಲಕ ಶ್ಯಾಮ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಾನು ಸಂತೆಕಟ್ಟೆ ಆಟೋ ಡ್ರೈವರ್. ಹೂವಿನ ಮಾರ್ಕೆಟ್ ಬಳಿ ನನ್ನ ಆಟೋ ಸ್ಟ್ಯಾಂಡ್ ಇದೆ. ಆತ ತೃಪ್ತಿ ಲೇಔಟ್ ಹತ್ತಿರ ಬಿಡುವಂತೆ ಹೇಳಿದ್ದ. ನಾನು ಆತನನ್ನು ಹೇಳಿದೆಡೆಗೆ ತಂದು ಬಿಟ್ಟೆ. ಆ ವ್ಯಕ್ತಿಯನ್ನು ಮನೆಗೆ ಬಿಟ್ಟು 15 ನಿಮಿಷದಲ್ಲಿ ಮತ್ತೆ ಸಂತೆಕಟ್ಟೆಯಲ್ಲಿ ಕಾಣಿಸಿಕೊಂಡಿದ್ದಾನೆ' ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಆಟೋ ಸ್ಟ್ಯಾಂಡ್ ನಲ್ಲಿ ಕ್ಯೂ ಸಿಸ್ಟಂ ಇದೆ. ಆತ ವಾಪಸ್ ಹೋಗುವಾಗ ನನಗೆ ಸಿಕ್ಕಿದ್ದ. `ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೆ' ಎಂದು ಹೇಳಿದೆ. ಆದರೆ, ಆತ ಆತುರದಲ್ಲಿ ಬೇರೆ ಆಟೋ ಹತ್ತಿ ಹೋಗಿದ್ದಾನೆ. ನಾವು ಬಾಡಿಗೆ ಮಾಡಿದ ಅರ್ಧ ಗಂಟೆಯಲ್ಲಿ ಈ ಕೃತ್ಯ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಆ ವ್ಯಕ್ತಿ ಬೆಂಗಳೂರು ಭಾಗದ ಕನ್ನಡ ಮಾತನಾಡುತ್ತಿದ್ದ. ಉಡುಪಿ- ಮಂಗಳೂರು ಕನ್ನಡ ಮಾತನಾಡುತ್ತಿರಲಿಲ್ಲ. ಕೃತ್ಯ ನಡೆಸಿ ಅಪರಿಚಿತರ ಬೈಕಿನಲ್ಲಿ ವಾಪಸ್ ಸಂತೆಕಟ್ಟೆಗೆ ಬಂದಿದ್ದಾನೆ.
ಆತ ಮಾಸ್ಕ್ ಹಾಕಿದ್ದ. ಬೋಳು ತಲೆ ಮತ್ತು ಬ್ಯಾಗ್ ವೊಂದನ್ನು ಹಾಕಿಕೊಂಡಿದ್ದ. ಆತ ಟಾರ್ಗೆಟ್ ಮಾಡಿದ್ದ ಮನೆ, ತೃಪ್ತಿ ಲೇಔಟ್ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬುದು ಸ್ಪಷ್ಟವಾಗಿದೆ ಎಂದು ಶ್ಯಾಮ್ ತಿಳಿಸಿದ್ದಾರೆ.
ಹಂತಕನ ಸುಳಿವು ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಂತಕನ ಪತ್ತೆಗೆ 5 ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.
ಖಂಡನೆ
ನೇಜಾರು ಘಟನೆಯನ್ನು ಖಂಡಿಸಿರುವ ಎಸ್ ಡಿ ಪಿ ಐ, ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ ಆಗ್ರಹಿಸಿದ್ದಾರೆ.
ವಕೀಲರಿಗೆ ಮನವಿ
ಮಲ್ಪೆ ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಆರೋಪಿ ಪರ ಯಾವುದೇ ವಕೀಲರು ವಾದಿಸದಂತೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್ ವಿನಂತಿಸಿದ್ದಾರೆ