ತೊಟ್ಟಂ ಚರ್ಚ್‌ನಲ್ಲಿ ಅಪ್ಪಂದಿರ ದಿನಾಚರಣೆ
Thursday, March 20, 2025
ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆ ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಕುಟುಂಬ ಆಯೋಗದ ನೇತೃತ್ವದಲ್ಲಿ ಬುಧವಾರ ಅಪ್ಪಂದಿರ ದಿನಾಚರಣೆ ಮಾಡಲಾಯಿತು.ಚರ್ಚ್‌ನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಪವಿತ್ರ ಬಲಿಪೂಜೆ ನೇರವೇರಿಸಿ, ಸಂದೇಶ ನೀಡಿ ಸಂತ ಜೋಸೆಫ್ ತಂದೆಯಂದಿರ ಪೋಷಕರಾಗಿದ್ದು ಅವರ ಸರಳತೆ, ಮೌನ ಹಾಗೂ ಆಧ್ಯಾತ್ಮಿಕತೆ ಸಕಲರಿಗೆ ಮಾದರಿಯಾಗಿದೆ.
ಸಂತ ಜೋಸೆಫ್ ಓರ್ವ ಮೌನ ಸಂತರಾಗಿದ್ದರು. ಇತರ ಪ್ರಸಿದ್ಧ ಸಂತರಿಗೆ ಹೋಲಿಸಿದರೆ ಹೆಚ್ಚಾಗಿ ಕಡೆಗಣಿಸಲ್ಪಡುತ್ತಿದ್ದರು. ಆದರೆ, ಅವರು ಮೋಕ್ಷದ ದೈವಿಕ ಯೋಜನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದರು.
ಪ್ರತಿಯೊಂದು ಕುಟುಂಬಗಳಲ್ಲಿ ತಂದೆಯ ಪಾತ್ರ ಮಹತ್ವದ್ದಾಗಿದ್ದು ಅವರ ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತೆ, ದಾನ ಮತ್ತು ಕ್ಷಮಾಗುಣ ಇತ್ಯಾದಿ ಪ್ರಮುಖ ಸಾಮರ್ಥ್ಯ ಗುರುತಿಸಬೇಕು. ಯಾವುದೇ ಸವಾಲುಗಳು ಎದುರಾದಾಗ ಅದನ್ನು ಧೈರ್ಯವಾಗಿ ಎದುರಿಸಲು ತಂದೆ, ತನ್ನ ಮಕ್ಕಳಿಗೆ ಸದಾ ಭರವಸೆಯ ವ್ಯಕ್ತಿಯಾಗಿರುತ್ತಾರೆ ಎಂದರು.
ಪವಿತ್ರ ಬಲಿಪೂಜೆ ಬಳಿಕ ಚರ್ಚ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಪ್ರೀತಿಯ ತಂದೆ ಮತ್ತು ಶ್ರದ್ಧಾಭರಿತ ಪತಿಯಾಗಿರುವಾಗ ಜೀವನದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಕುರಿತು ಒಳನೋಟ ನೀಡಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸುನಿಲ್ ಫೆರ್ನಾಂಡಿಸ್ ಇದ್ದರು.
ಕುಟುಂಬ ಆಯೋಗದ ಸಂಚಾಲಕ ಹೆರಾಲ್ಡ್ ಡಿ'ಸೋಜಾ ಸ್ವಾಗತಿಸಿ, ಧರ್ಮಪ್ರಾಂತ್ಯದ ಕುಟುಂಬ ಆಯೋಗದ ಕಾರ್ಯದರ್ಶಿ ಲೆಸ್ಲಿ ಅರೋಝಾ ನಿರೂಪಿಸಿದರು.