-->
ಮಲ್ಪೆ ಘಟನೆ ಒಪ್ಪತಕ್ಕದ್ದಲ್ಲ

ಮಲ್ಪೆ ಘಟನೆ ಒಪ್ಪತಕ್ಕದ್ದಲ್ಲ

ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಒಪ್ಪಿಕೊಳ್ಳುವಂಥದ್ದಲ್ಲ. ಮೀನು ಕಳವು ಮಾಡಿದ್ದರೆ ನೇರವಾಗಿ ಹಿಡಿದು ಪೋಲಿಸರಿಗೆ ಕೊಡಬಹುದಿತ್ತು. ಇದೀಗ ಪ್ರತಿಭಟನೆ ಮಾಡಿದರೂ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಒಮ್ಮೆ ದಾಖಲಾದರೆ ನ್ಯಾಯಾಲಯದಲ್ಲಿಯೇ ತೀರ್ಮಾನ ಆಗಬೇಕು. ಮುಂದಿನ ದಿನಗಳಲ್ಲಿ ಇಂಥ ಅಮಾನುಷ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.


ಮಲ್ಪೆ ಬಂದರಿನಲ್ಲಿ ಕಳ್ಳತನ ಪ್ರಕರಣ ಹೆಚ್ಚು ನಡೆಯುತ್ತಿದೆ ಎಂಬ ಆರೋಪವಿದೆ. ಈ ಬಗ್ಗೆ ಬಂದರು ನಿರ್ವಹಣೆಯನ್ನು ಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಮಾಡಬೇಕು. ಸಿಸಿ ಟಿವಿ ಅಳವಡಿಸಬೇಕು ಎಂದರು.


ನೈತಿಕತೆ ಬೇಕು
ಹನಿಟ್ರ್ಯಾಪ್'ನಂಥ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ಯಾರು ಕೂಡಾ ಹನಿಟ್ರ್ಯಾಪ್'ಗೆ ಸಿಕ್ಕಿಹಾಕಿಕೊಳ್ಳಬಾರದು. ಹನಿಟ್ರ್ಯಾಪ್ ಮಾಡಬಾರದು, ಟ್ರ್ಯಾಪ್'ಗೂ ಸಿಕ್ಕಿಹಾಕಿಕೊಳ್ಳಬಾರದು. ಜನಪ್ರತಿನಿಧಿಗಳಿಗೆ ನೈತಿಕತೆ ಅಗತ್ಯ ಎಂದು ಹೆಗ್ಡೆ ಹೇಳಿದರು.


ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆಂದು ಸರ್ಕಾರ ಹೇಳಿದ್ದು, ಮುಖ್ಯಮಂತ್ರಿ ಭದ್ರತೆ ಕೊಡುವ ಭರವಸೆ ನೀಡಿದ್ದಾರೆ. ಯಾರು ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಗೊತ್ತಿದ್ದರೆ ಹೇಳಲಿ. ಟ್ರ್ಯಾಪ್ ಮಾಡಿದವರದ್ದು ತಪ್ಪಾ? ಟ್ರ್ಯಾಪ್ ಆದವರದ್ದು ತಪ್ಪಾ? ನಾವೇ ಜಾಗೃತರಾಗಬೇಕು ಎಂದರು.


ಐ ಗೋಬ್ಯಾಕ್ ದೋಸ್ ಡೇಸ್..
ನಮ್ಮ ಕಾಲ ನೆನಪಾಗುತ್ತದೆ. ಅದೊಂದು ಎಂಥಾ ರಾಜಕೀಯ ಕಾಲ ಇತ್ತು. ಬದಲಾವಣೆ ನೋಡುವಾಗ ಬೇಸರವಾಗುತ್ತದೆ. ಜನಪ್ರತಿನಿಧಿಗಳ ಆಯ್ಕೆ ಮಾಡುವಾಗ ಜನರು ಎಚ್ಚೆತ್ತುಕೊಳ್ಳಬೇಕು.


ಸದನದಲ್ಲಿ ದಾಂಧಲೆ ತಪ್ಪು
ಸದನದಲ್ಲಿ ಬಿಜೆಪಿಯವರ ದಾಂಧಲೆ ವೆರಿ ವೆರಿ ಬ್ಯಾಡ್. ಇದು ತಪ್ಪು. ಸ್ಪೀಕರ್ ಕುಳಿತಾಗ ವೇದಿಕೆ ಹತ್ತುವುದು ಬಹಳ ದೊಡ್ಡ ತಪ್ಪು. ಸ್ಪೀಕರ್ ಹುದ್ದೆ ಸದನದ ಉನ್ನತ ಸ್ಥಾನ. ಅವರ ಪೀಠಕ್ಕೆ ಹೋಗಬಾರದು. ಸದನದ ಕಾನೂನು ರಕ್ಷಣೆ ಮಾಡಿದವರು ಹೊರಗೆ ಯಾವ ಕಾನೂನು ರಕ್ಷಣೆ ಮಾಡುತ್ತಾರೆ? ಬೇರೆಯವರಿಗೆ ಏನು ಕಾನೂನು ರಚಿಸುತ್ತಾರೆ ಎಂಬುದು ಪ್ರಶ್ನೆ. ಆ ಕುರ್ಚಿಗೆ ಒಂದು ಘನತೆ ಇಲ್ಲವೇ ಎಂದು ಜಯಪ್ರಕಾಶ ಹೆಗ್ಡೆ ಹೇಳಿದರು.


ಅನುದಾನ ಶಾಸಕರಿಗೆ
ಕರಾವಳಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದಿರುವ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಡೆ, ಅನುದಾನಗಳೆಲ್ಲ ಬರುವುದು ಶಾಸಕರಿಗೆ. ಹೀಗಾಗಿ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ಮಾಡುವ ಅಧಿಕಾರ ಶಾಸಕರಿಗಿದೆ. ಕೆಲಸ ಮಾಡಲು ಸಾಧ್ಯ ಆಗದ ಪರಿಸ್ಥಿತಿ ಇಲ್ಲ.


ವಿರೋಧ ಪಕ್ಷದವರು ಸರಕಾರವನ್ನು ದೂರುವುದು ಸ್ವಾಭಾವಿಕ. ನಾನು ಪಕ್ಷೇತರನಾಗಿಯೂ ಕೆಲಸ ಮಾಡಿದ್ದೇನೆ. ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳ ಸಭೆ ಕರೆದರೆ, ಜನರ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೆಗ್ಡೆ ಸಲಹೆ ನೀಡಿದರು.

Ads on article

Advertise in articles 1

advertising articles 2

Advertise under the article