
ಸುನೀತಾ ಸಾಧನೆಗೆ ಪುತ್ತಿಗೆ ಶ್ರೀ ಅಭಿನಂದನೆ
Thursday, March 20, 2025
ಲೋಕಬಂಧು ನ್ಯೂಸ್
ಉಡುಪಿ: ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಮರಳಿ ಬರುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿನಂದಿಸಿದ್ದು, ಸುನೀತಾ ಅವರ ಸಾಧನೆ ಚಿರಸ್ಥಾಯಿಯಾಗಲಿ ಎಂದು ಆಶೀರ್ವದಿಸಿದ್ದಾರೆ.
ಸುನೀತಾ ಸುರಕ್ಷಿತ ಆಗಮನ ಹಾರೈಸಿ ಶ್ರೀಕೃಷ್ಣನಿಗೆ ವಿಶೇಷ ಪೂಜೆಯೊಂದಿಗೆ ಪ್ರಾರ್ಥಿಸಲಾಗಿತ್ತು. ಆ ಪ್ರಯುಕ್ತ ಉಡುಪಿಯಲ್ಲಿ ವೇದ ಪಠಣ, ಅಮೆರಿಕಾ, ಆಸ್ಟ್ರೇಲಿಯಾ, ಯುಕೆ, ಕೆನಡಾದಲ್ಲಿರುವ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗಿತ್ತು. ನ್ಯೂಜೆರ್ಸಿ ಡಲ್ಲಾಸ್, ಲಾಸ್ ಏಂಜಲೀಸ್, ಹೂಸ್ಟನ್, ಶಿಕಾಗೋ ನಗರದಲ್ಲಿರುವ ದೇವಾಲಯ, ಮೆಲ್ಬೋರ್ನ್, ಲಂಡನ್, ಟೊರೊಂಟೊದ ಶಾಖೆಗಳಲ್ಲಿ ಪ್ರಾರ್ಥನೆ ನೆರವೇರಿಸಲಾಗಿತ್ತು.