
ತುಳುನಾಡು ಭಿನ್ನ ಸಂಸ್ಕೃತಿಯ ನೆಲೆವೀಡು
Thursday, March 20, 2025
ಲೋಕಬಂಧು ನ್ಯೂಸ್
ಉಡುಪಿ: ತುಳುನಾಡು ಕರ್ನಾಟಕದಲ್ಲಿಯೇ ಭಿನ್ನ ಹಾಗೂ ಸುಂದರ ಸಂಸ್ಕೃತಿಯ ನೆಲೆವೀಡು. ಇಲ್ಲಿನ ಭಾಷೆ, ಆಚಾರ- ವಿಚಾರ, ಜಾನಪದ, ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸಂಗಮ ಕಲಾವಿದೆರ್ ಮಣಿಪಾಲ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಮಂಗಳವಾರ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತುಳು ಸಾಹಿತ್ಯ ಸಾಂಸ್ಕೃತಿಕ ಹಬ್ಬ 'ಕುರಲ್' ಉದ್ಘಾಟಿಸಿ ಮಾತನಾಡಿದರು.
ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಆಚರಣೆಯನ್ನು ತುಳುನಾಡು ಹೊಂದಿದೆ. ನಾಗಾರಾಧನೆ, ಭೂತಾರಾಧನೆ, ಹಬ್ಬಗಳು, ಕಂಗೀಲು, ಆಟಿಕಳಂಜ ಇತ್ಯಾದಿ ಆಚರಣೆಗಳು ತುಳುನಾಡಿನ ಆಚರಣೆ, ಸಂಸ್ಕೃತಿ, ಜನ ಜೀವನದ ಭಾಗವಾಗಿದೆ. ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಈ ಎಲ್ಲಾ ಆಚರಣೆಗಳನ್ನು ಜೀವಂತವಾಗಿ ಉಳಿಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ತುಳು ಭಾಷೆಯನ್ನು ಮನೆಯಲ್ಲೂ ಮಾತನಾಡುವಂತೆ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ, ಭಾಷೆಯ ಜತೆಗೆ ಜನ ಜೀವನ, ಆಟಗಳು, ಸಂಪ್ರದಾಯ, ಸಾಹಿತ್ಯಿಕ ಪರಂಪರೆ, ಜ್ಞಾನ ಪರಂಪರೆ ಹೀಗೆ ಎಲ್ಲವನ್ನೂ ಸಮಗ್ರ ಒಳಗೊಳ್ಳುವುದೇ ತುಳು ಬದುಕು ಎಂದು ಬಣ್ಣಿಸಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಬಾಬು ಕೊರಗ ಮತ್ತು ಉದ್ಯಾವರ ನಾಗೇಶ್ ಕುಮಾರ್, ಸಂಗಮ ಕಲಾವಿದೆರ್ ಅಧ್ಯಕ್ಷ ರಾಘವೇಂದ್ರ ನಾಯ್ಕ ಗೌರವಾಧ್ಯಕ್ಷ ಸುದೇಶ್ ಕೆ. ರಾವ್, ಕಾರ್ಯಕ್ರಮ ಸಂಚಾಲಕ ಶ್ರೇಯಸ್ ಕೋಟ್ಯಾನ್ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂತೋಷ ಶೆಟ್ಟಿ ಹಿರಿಯಡಕ ಸ್ವಾಗತಿಸಿ, ಸಂಗಮ ಕಲಾವಿದೆರ್ ಕಾರ್ಯದರ್ಶಿ ಪವನ್ ಪೂಜಾರಿ ವಂದಿಸಿದರು. ಪ್ರಾಧ್ಯಾಪಕ ಸುಚಿತ್ ಕೋಟ್ಯಾನ್ ನಿರೂಪಿಸಿದರು.
ಅನಂತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು.