-->
ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ

ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ

ಲೋಕಬಂಧು ನ್ಯೂಸ್
ಉಡುಪಿ: ನಾನೇನು ಹೇಡಿಯಲ್ಲ, ಓಡಿ ಹೋಗುವುದಿಲ್ಲ. ನಾನು ಚುನಾವಣೆಯ ಪ್ರಣಾಳಿಕೆಯಲ್ಲಿ ಕಸಾಪ ಬೈಲಾಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುವುದಾಗಿ ಹೇಳಿದ್ದೇನೆ, ಅದರಂತೆ ನಡೆದುಕೊಂಡಿದ್ದೇನೆ. ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ. ನಾನು ಕರ್ತವ್ಯಭ್ರಷ್ಟ ಅಗಲಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಹಾಗಿರುವಾಗ ಕಸಾಪ ಬೈಲಾಕ್ಕೆ ತಿದ್ದುಪಡಿ ಮಾಡಲಿಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಅಲ್ಲದೆ ಕಸಾಪ ಬೈಲಾ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿಲ್ಲ, ಈ ಹಿಂದೆಯೂ ಮಾಡಲಾಗಿದೆ. ಹಾಗಿರುವಾಗ ತಾವು ಅಗತ್ಯ ತಿದ್ದುಪಡಿ ಮಾಡಿದರೆ ಕಾನೂನು ಬಾಹಿರ ಹೇಗಾಗುತ್ತದೆ ಎಂದರು.


ಈಗಿರುವ ಬೈಲಾದಲ್ಲಿ ನಾಮನಿರ್ದೇಶಿತ ಸದಸ್ಯರ ಅವಧಿ, ಕಾರ್ಯಕಾರಿ ಸದಸ್ಯರು ಸತತ 3 ಬಾರಿ ಸಭೆಗೆ ಗೈರು ಹಾಜರಾದರೆ ಕ್ರಮ, ಮಹಿಳೆಯರು ಅಧ್ಯಕ್ಷರಾಗುವುದಕ್ಕೆ ಅವಕಾಶ, ಅಧ್ಯಕ್ಷರ ಅಕಾಲಿಕ ಮರಣದ ಸಂದರ್ಭದಲ್ಲಿ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ, ಸ್ಪಷ್ಟತೆ ತರುವುದಕ್ಕಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾದಲ್ಲಿ ತರಲುದ್ದೇಶಿರುವ ತಿದ್ದುಪಡಿಗಳು ಕಾನೂನು ಬಾಹಿರ ಎಂದು ನ್ಯಾಯಾಲಯದಲ್ಲಿ ಸಾಬೀತು ಮಾಡಿ ಎಂದು ತಿದ್ದುಪಡಿಯನ್ನು ವಿರೋಧಿಸುತ್ತಿರುವವರಿಗೆ  ಸವಾಲು ಹಾಕಿದರು.


ಕಸಾಪ ನಿಬಂಧನೆಗಳ ಪ್ರಕಾರವೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿಯೇ ತಿದ್ದುಪಡಿ ಸಮಿತಿ ರಚಿಸಿ, ಅವರು ನೀಡಿದ ಶಿಫಾರಸ್ಸುಗಳನ್ನು ಕಸಾಪ ಕಾರ್ಯಕಾರಿ ಸಮಿತಿಗೆ ಮಂಡಿಸಿ, ಬಹುಮತದ ಒಪ್ಪಿಗೆ ಪಡೆಯಲಾಗಿದೆ. ಅದನ್ನು ಕಸಾಪ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಬೇಕಾಗಿದೆ.


ಆದರೆ ಈಗ ತನ್ನೆದುರು ಕಸಾಪ ಚುನಾವಣೆಯಲ್ಲಿ ಹೀನಾಯವಾಗಿ ಸೋತವರು ಸೇಡು ತೀರಿಸಿಕೊಳ್ಳಲು ತಿದ್ದುಪಡಿಯನ್ನು ವಿರೋಧಿಸುತಿದ್ದಾರೆ, ಕಾನೂನು ಬಾಹಿರ ಎನ್ನುತಿದ್ದಾರೆ. ನನ್ನನ್ನು ಸರ್ವಧಿಕಾರಿ ಎನ್ನುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ  ನ್ಯಾಯಾಲಯದಿಂದ ತಡೆಯಾಜ್ಞೆ ಇದೆ, ಅವರೀಗ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ನ್ಯಾಯಾಲಕ್ಕೆ ಬಂದು ತಮ್ಮ ಆರೋಪ ಸಾಬೀತು ಮಾಡಲಿ ಎಂದರು.


ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶ್ರೀನಾಥ ರಾವ್ ಇದ್ದರು.

Ads on article

Advertise in articles 1

advertising articles 2

Advertise under the article