.jpg)
ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು
Wednesday, April 30, 2025
ಲೋಕಬಂಧು ನ್ಯೂಸ್
ಉಡುಪಿ: ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು. ಭಾಷೆಯ ವಿಚಾರದಲ್ಲಿ ಅನೇಕ ಪರ-ವಿರೋಧ ಅಭಿಪ್ರಾಯಗಳಿವೆ. ಮಕ್ಕಳಿಗೆ ಶಾಲೆಯಲ್ಲಿ ಇಂಗ್ಲಿಷ್ ಕಷ್ಟವಾಗುತ್ತದೆ ಎಂದು ಹೆತ್ತವರು ಮನೆಯಲ್ಲೇ ಇಂಗ್ಲಿಷ್ ಮಾತನಾಡುವ ಪ್ರವೃತ್ತಿ ಬೆಳೆಯುತ್ತಿದೆ. ಹೀಗಾಗಿ ಮಕ್ಕಳು ಕನ್ನಡದಿಂದ ದೂರವಾಗುತ್ತಿದ್ದಾರೆ ಎಂದು ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ ವಿಷಾದಿಸಿದರು.
ಬುಧವಾರ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳವಧಿಯ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಸಾಹಿತ್ಯ ಸಮ್ಮೇಳನ `ಸುಕೃತಿ'ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮತನ ಮತ್ತು ನಮ್ಮ ಭಾಷೆಯನ್ನು ಬಿಟ್ಟುಕೊಟ್ಟರೆ ಯುವಜನಾಂಗ ಸಂಸ್ಕೃತಿಯಿಂದ ವಿಮುಖರಾಗಲಿದ್ದಾರೆ. ಹಸ್ತಪ್ರತಿಗಳು ಕನ್ನಡ ನಾಡಿನ ಸಂಪತ್ತಾಗಿದ್ದು, ಅಪ್ರಕಟಿತ ಪ್ರಾಚೀನ ಕೃತಿಗಳನ್ನು ವಿಶ್ವವಿದ್ಯಾಲಯಗಳು ಮುದ್ರಿಸಬೇಕು. ಆ ಮೂಲಕ ಕನ್ನಡ ಸಂಪತ್ತು ಉಳಿಸುವ ಕೆಲಸವಾಗಬೇಕು ಎಂದರು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಮ್ಮೇಳನ ಉದ್ಘಾಟಿಸಿ, ಮನುಷ್ಯನಿಗೆ ಜೀವನದಲ್ಲಿ ಹಣ ಸಂಪಾದನೆಯೊಂದೇ ಮುಖ್ಯ ಎಂಬ ಮನೋಭಾವ ಸಲ್ಲದು. ಭೌತಿಕವಾಗಿ ಸಾಹಿತ್ಯದಿಂದ ವ್ಯಕ್ತಿತ್ವ ಹಾಗೂ ಆತ್ಮ ವಿಕಸನ ಸಾಧ್ಯ. ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, ಕಲೆ, ಅಧ್ಯಾತ್ಮಿಕತೆಗೆ ಕರ್ನಾಟಕವೇ ತವರು ಎಂದರು.
ಕನ್ನಡದ ಜಾಗೃತಿಗಾಗಿ ಸಾಹಿತ್ಯ ಸಮ್ಮೇಳನಗಳು ಅತೀ ಅವಶ್ಯವಾಗಿದೆ. ಮಕ್ಕಳಿಗೆ ನಮ್ಮ ನಾಡಿನ ಪರಂಪರೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡದ ಎರಡು ಕಣ್ಣುಗಳಿದ್ದಂತೆ. ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸಿದರೂ ಮನೆಯಲ್ಲಿ ಕನ್ನಡ ಮಾತನಾಡಬೇಕು. ಆ ಮೂಲಕ 2 ಸಾವಿರ ವರ್ಷಗಳ ಶ್ರೀಮಂತ ಪರಂಪರೆ ಹೊಂದಿರುವ ಕನ್ನಡದ ಉಳಿಸಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಶಾಸಕ ಯಶಪಾಲ್ ಸುವರ್ಣ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಬಾಬು ಪೂಜಾರಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಆನಂದ ಕುಂದರ್, ಮಾಜಿ ಶಾಸಕ ಕೆ.ರಘುಪತಿ ಭಟ್, ಕಸಾಪ ತಾಲೂಕು ಅಧ್ಯಕ್ಷರಾದ ಕೆ.ರಾಮಚಂದ್ರ ಐತಾಳ್, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ಶ್ರೀನಿವಾಸ ಭಂಡಾರಿ, ಡಾ. ಉಮೇಶ್ ಪುತ್ರನ್ ಮೊದಲಾದವರಿದ್ದರು.
ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅರುಣ್ ಕುಮಾರ್ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು. ಸತೀಶ್ ವಡ್ಡರ್ಸೆ ನಿರೂಪಿಸಿದರು. ಪಿ.ವಿ.ಆನಂದ ಸಾಲಿಗ್ರಾಮ ವಂದಿಸಿದರು.