
ಕರಾವಳಿಯಲ್ಲಿ ಆ್ಯಂಟಿ ಕಮ್ಯುನಲ್ ಕಾರ್ಯಪಡೆ ಸ್ಥಾಪನೆಗೆ ನಿರ್ಧಾರ
Saturday, May 3, 2025
ಲೋಕಬಂಧು ನ್ಯೂಸ್
ಮಂಗಳೂರು: ಕೋಮು ಗಲಭೆಗೆ ಕಾರಣವಾಗುವ ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಪಟ್ಟ 8 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನು ಕೇರಳ ಮೂಲದ ಅಶ್ರಫ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ 21 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ. ಯಾವುದೇ ಸಮುದಾಯದವರೇ ಆಗಲಿ, ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ.
ಇನ್ನು ಮುಂದೆ ಇಂಥ ಘಟನೆಗಳು ಜಿಲ್ಲೆಯಲ್ಲಿ ನಡೆಯಬಾರದು. ಈ ಹಿಂದೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಪಾದಯಾತ್ರೆ ನಡೆಸಿದ್ದೆವು. ಇದೀಗ ಮತ್ತೆ ಈ ಘಟನೆಗಳು ಮರುಕಳಿಸುತ್ತಿವೆ. ಅದರ ಹಿಂದೆ ಅನೇಕ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಅಂಥ ಶಕ್ತಿಗಳನ್ನು ಹುಟ್ಟುಹಾಕಲು ಬಿಡುವುದಿಲ್ಲ. ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸಬಾರದು ಎಂಬ ಗುರಿಯೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆ ತಡೆ ನಿಟ್ಟಿನಲ್ಲಿ ಐಜಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ‘ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್’ ಸ್ಥಾಪಿಸಲಾಗುವುದು. ಅದನ್ನು ಮಂದಿನ ಎರಡು ವಾರಗಳಲ್ಲಿ ಮಾಡಲಾಗುವುದು.
ಈ ಟಾಸ್ಕ್ ಫೋರ್ಸ್ ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಲಿದೆ ಎಂದರು.
ಜಿಲ್ಲೆಯಲ್ಲಿ ಕಮ್ಯುನಲ್ ಭಾಷಣ ಮಾಡುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಶಾಂತಿಯಿಂದ ಇರಬೇಕು. ಜನರೂ ಇಲ್ಲಿಗೆ ಬರಬೇಕು. ಅದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಎರಡು ಜಿಲ್ಲೆಯಲ್ಲಿ ಮಾತ್ರ ಈ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡ್ತದೆ. ಐಜಿಪಿ ನೇತೃತ್ವದಲ್ಲಿ ಕೆಲಸ ಮಾಡುತ್ತದೆ ಎಂದು ಗೃಹಸಚಿವ ಸ್ಪಷ್ಟಪಡಿಸಿದರು.